ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡು ಕಾರ್ಪೋರೆಟ್ ಪರ ನಿಲುವಿನಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದ್ದು, ಇಂತಹ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ತುಮಕೂರಿನಲ್ಲಿ ನಡೆದ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಸಹಸ್ರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಸಮಸ್ಯೆಗಳ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆಯಾಗಿದ್ದು, ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಆರೋಪಿಸಿದರು.
ಜನರ ಆಕ್ರೋಶಕ್ಕೆ ಮಣಿಯದ ಸರಕಾರಗಳೇ ಇಲ್ಲ, ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ, ಜನಶಕ್ತಿಯ ಮುಂದೆ ರಾಜ್ಯಶಕ್ತಿ ಏನು ಮಾಡಲು ಸಾಧ್ಯವಿಲ್ಲ ಎಂಬುದು ಈ ಹೋರಾಟ ಸಾಭೀತುಪಡಿಸಿದೆ. ದೇಶದ ಇತಿಹಾಸದಲ್ಲಿ ನೂರುಪಟ್ಟು ಬೆಲೆ ಏರಿಕೆ ಆಗಿರುವುದು ಇದೇ ಮೊದಲು, ಬಿಜೆಪಿಗರು ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳವಾದಾಗ ಬೀದಿಗೆ ಇಳಿಯುತ್ತಿದ್ದರು, ಈಗ ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಲ್ಲದ ಬಿಜೆಪಿ ಜನಸ್ವರಾಜ್ ಯಾತ್ರೆ ಮಾಡುತ್ತಿದೆ. ಬಿಜೆಪಿಗರು ಲಜ್ಜೆಗೆಟ್ಟವರು, ಗ್ರಾಮ ಸ್ವರಾಜ್‌ಗೆ ವಿರುದ್ದವಾಗಿ ಬಿಜೆಪಿ ಜನಸ್ವರಾಜ್ ಹೆಸರಿನಲ್ಲಿ ಮತ ಕೇಳುತ್ತಿದೆ. ಇವರಿಗೆ ನೈತಿಕತೆ ಇದೆಯೇ? ಗ್ರಾಮಕ್ಕೆ ಅಧಿಕಾರ ಮತ್ತು ಅನುದಾನ ಕೊಟ್ಟಿದ್ದು ಕಾಂಗ್ರೆಸ್, ನರೇಗಾ ಯೋಜನೆ ತಂದಿದ್ದು ಮನಮೋಹನ್ ಸಿಂಗ್ ಹೊರತು ನರೇಂದ್ರ ಮೋದಿ ಅಲ್ಲ, ವೋಟು ಕೊಟ್ರೆ ಗ್ರ‍್ಯಾಂಟು ಕೊಡ್ತೀವಿ ಅನ್ನುವವರಿಗೆ ಬುದ್ಧಿ ಇದೆಯೇ? ಎಂದು ಕೇಳಿದರು.
ರಾಜ್ಯದಲ್ಲಿ ಮಳೆಯಿಂದ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿದೆ, ಮುಖ್ಯಮಂತ್ರಿಗಳು ಚಲನಚಿತ್ರ ಬಿಡುಗಡೆ ಮಾಡುವಲ್ಲಿ ನಿರತರಾಗಿದ್ದಾರೆ, ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವಾನ ಹೇಳುವ ಕೆಲಸವನ್ನು ಮಾಡಲಿಲ್ಲ, ಕೈಮುಗಿದು ಕೇಳಿಕೊಳ್ಳುತ್ತೇನೆ ಬಿಜೆಪಿ ಗೆಲ್ಲಿಸಬೇಡಿ. ಮೋದಿ ಹೆಸರಿನಲ್ಲೆ ಇನ್ನು ಬಿಜೆಪಿಗರು ಬದುಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.