ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆ ಮಾಡಿದ್ದರೂ ಕೃಷಿ ಮಸೂದೆಗಳ ಕರಡನ್ನು ಮರು ರಚಿಸುವ ಸಾಧ್ಯತೆ ಇದೆ ಎಂದು ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸರ್ಕಾರ ಕೃಷಿ ಕಾನೂನುಗಳ ಉಪಯೋಗವನ್ನು ಮನವರಿಕೆ ಮಾಡಲು ಯತ್ನಿಸಿತು. ಆದರೆ ರೈತರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಹಠಕ್ಕೆ ಬಿದ್ದರು. ಹಾಗಾಗಿ ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಸರ್ಕಾರ ತಿಳಿಸಿದೆ. ಅಗತ್ಯ ಬಿದ್ದರೆ ಮರುಕರಡು ರಚಿಸಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮಸೂದೆಗಳಿಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಮಸೂದೆಗಳು ಬರುತ್ತವೆ ಹೋಗುತ್ತವೆ. ಅವುಗಳನ್ನು ರದ್ದುಗೊಳಿಸಲಾಗುತ್ತದೆ. ನಂತರ ಅವುಗಳ ಮರು ಕರಡು ಮಾಡಬಹುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಲೋಕ ದಳ ಅಧ್ಯಕ್ಷ ಜಯಂತ್ ಚೌಧರಿ ಮಾತನಾಡಿ, ಈಗಾಗಲೇ ರೈತರಿಗೆ ಎಚ್ಚರಿಕೆ ನೀಡಿದ್ದು ಚುನಾವಣೆಯ ನಂತರ ಕಾನೂನುಗಳನ್ನು ಮರಳಿ ತರಲಾಗುವುದು ಎಂದು ಹೇಳಿದ್ದಾರೆ.
ಎಎಪಿ ವಕ್ತಾರ ವೈಭವ್ ಮಾಹೇಶ್ವರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮಾತಿನಲ್ಲಿ ದೇಶದ ರೈತರಿಗೆ ನಂಬಿಕೆ ಇಲ್ಲ. ಪ್ರಧಾನಿ ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆದಾಗ ಮಾತ್ರ ನಾವು ಕೇಂದ್ರವನ್ನು ನಂಬುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.