ಮುಂಬರುವ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದರೂ ಪೂರ್ವ ಯೋಜಿತ ಪ್ರತಿಭಟನೆ ಮುಂದುವರೆಸಲು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನಿಸಿದೆ.
ನವೆಂಬರ್ 22ರಂದು ಲಕ್ನೋದಲ್ಲಿ ರೈತ ಮಹಾಪಂಚಾಯತ್ ನಡೆಯಲಿದೆ. ನವೆಂಬರ್ 26 ರಂದು ಪ್ರತಿಯೊಂದು ರಾಜ್ಯದ ರಾಜಧಾನಿ ನಗರಗಳಲ್ಲಿ ಟ್ರ್ಯಾಕ್ಟರ್ ಮತ್ತು ಎತ್ತಿನಬಂಡಿ ಮೆರವಣಿಗೆಗಳು ನಡೆಯಲಿವೆ ಎಂದು ಭಾನುವಾರ ಸೇರಿದ್ದ ಕೋರ್ ಕಮಿಟಿ ತಿಳಿಸಿದೆ.
ನ್ಯಾಯಯುತತ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು. ಪ್ರತಿಭಟನಾನಿರತ ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಮೃತ ರೈತರ ಕುಟುಂಬಗಳಿಗೆ ಕೇಂದ್ರದಿಂದ ಸೂಕ್ತ ಪರಿಹಾರ ನೀಡಲು ಶಾಸನಬದ್ಧ ಖಾತರಿ ನೀಡಬೇಕು ಎಂದು ಒತ್ತಾಯಿಸಿದೆ.
ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು. ದೆಹಲಿಯಲ್ಲಿ ವಾಯು ಗುಣಮಟ್ಟ ನಿಯಂತ್ರಣ ಸಂಬಂಧ ಇರುವ ಕಾನೂನು ಮೂಲಕ ದಂಡ ವಿಧಿಸಲು ಪ್ರಯತ್ನಿಸುತ್ತಿದ್ದು ಇದು ನಿಲ್ಲಬೇಕು ಎಂದು ಆಗ್ರಹಿಸಿದರು.
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿಗೆ ಟ್ರ್ಯಾಕ್ಟರ್ ಮೆರವಣಿಗೆ ಸೇರಿ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ರೈತ ಪ್ರತಿಭಟನೆಯ ವಾರ್ಷಿಕ ಆಚರಣೆ, ಅಧಿವೇಶನದಲ್ಲಿ ಪ್ರತಿದಿನ ಸುಮಾರು 500 ರೈತರು ಟ್ರ್ಯಾಕ್ಟರ್ ಮೆರವಣಿಗೆಯನ್ನು ಕೈಗೊಳ್ಳುವ ನಿರೀಕ್ಷೆ ಇದೆ.
ನವೆಂಬರ್ 28ರಂದು ಮುಂಬೈನ ಅಜಾದ್ ಮೈದಾನದಲ್ಲಿ ಸಂಯುಕ್ತ ಶೆಟ್ಕರಿ ಕಾಮಗಾರಿ ಮೋರ್ಚಾದ ಬ್ಯಾನರ್ ಅಡಿಯಲ್ಲಿ 100ಕ್ಕೂ ಹೆಚ್ಚು ರೈತ ಸಂಘಟನೆಗಳೊಂದಿಗೆ ಬೃಹತ್ ಮಹಾರಾಷ್ಟ್ರದ ಕಿಸಾನ್ ಮಜ್ಚೂರ್ ಮಹಾಪಂಚಾಯತ್ ಆಯೋಜಿಸಿದೆ. ನವೆಂಬರ್ 29ರಿಂದ ನಡೆಯಲಿರುವ ಅಧಿವೇಶನದ ಹಿನ್ನೆಲೆಯಲ್ಲಿ ಸಂಸತ್ತಿಗೆ ಪ್ರತಿದಿನ 500 ಪ್ರತಿಭಟನಾಕಾರರು ಟ್ರ್ಯಾಕ್ಟರ್ ಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.


