ಜನ ಜಾಗೃತಿ ಸಮಾವೇಶದ ಭಾಗವಾಗಿ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ತುಮಕೂರಿನ ಟೌನ್ ಹಾಲ್ ನಿಂದ ಅಮಾನಿಕೆರೆ ಗಾಜಿನ ಮನೆಯವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೆರವಣಿಗೆಗೆ ಚಾಲನೆ ನೀಡಿ ಒಂದು ಕಿಲೋ ಮೀಟರ್ ದೂರದವರೆಗೆ ಮೆರಣಿಗೆಯಲ್ಲಿ ಕಾರ್ಯಕರ್ತರ ಜೊತೆ ಹೆಜ್ಜೆ ಹಾಕಿದರು.
ಮೆರವಣಿಗೆಯಲ್ಲಿ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಪ್ರಮುಖರಿಗೆ ಜಯಘೋಷ ಹಾಕಿದರು. ಕಾಂಗ್ರೆಸ್ ಪಕ್ಷದ ಬಾವುಟ ಗಳನ್ನು ಹಿಡಿದು ಗಾಳಿಯಲ್ಲಿ ಹಾರಿಸುತ್ತಾ ‘ಡಿಕೆ, ಡಿಕೆ, ಡಿಕೆ ಎಂದು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಹಳೆಯ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣಕ್ಕೂ ಮೊದಲೇ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರ ಜೊತೆ ಸೇರಿಕೊಂಡು ಸಾಥ್ ನೀಡಿದರು. ಕಾರ್ಯಕರ್ತರು ಅತ್ಯಂತ ಹುಮ್ಮಸ್ಸಿನಿಂದ ಕೇಕೆ ಹಾಕುತ್ತಾ ಜನ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದ ಗಾಜಿನ ಮನೆಯತ್ತ ತೆರಳಿದರು.
ಜಿಲ್ಲೆಯ ಹತ್ತೂ ತಾಲ್ಲೂಕುಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮ ವ್ಯಕ್ತಪಡಿಸುತ್ತಾ, ಬಸ್ ಗಳಲ್ಲಿ ತುಮಕೂರಿಗೆ ಆಗಮಿಸಿದರು. ಎಲ್ಲೆಡೆಯಿಂದ ಬಂದ ಕಾರ್ಯಕರ್ತರು ನಗರ ಪಾಲಿಕೆಯ ಆವರಣದೊಳಗೆ ಸೇರಿ ನಂತರ ಮೆರವಣಿಗೆ ನಡೆಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಜನ ಜಾಗೃತಿ ಸಮಾವೇಶಕ್ಕೂ ಮೊದಲು ಮೆರವಣಿಗೆ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ನಿರಂತರ ಮಳೆ ಸುರಿಯುತ್ತಿದ್ದು ಮಳೆನೀರು ಹೊಲಗಳಿಗೆ ನುಗ್ಗಿ ಭತ್ತ, ರಾಗಿ ಬೆಳೆ ಮಣ್ಣು ಪಾಲಾಗಿದೆ. ಸಾವಿರಾರು ಮನೆಗಳು ಕುಸಿದು ಬಿದ್ದಿವೆ. ಕೋಟ್ಯಂತರ ರೂಪಾಯಿ ಹಾನಿಯಾಗಿದೆ. ಆದರೆ ರಾಜ್ಯ ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ನಿನ್ನೆ ಆರೋಪಿಸಿದ್ದರು.


