ಉತ್ತರ ಪ್ರದೇಶದ ಲಖಿಂಪುರ ಖೇರಿಯ ರೈತರ ಹತ್ಯಾ ಪ್ರಕರಣದ ಸಂಬಂಧ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಮತ್ತು ಅವರ ಪುತ್ರ ಅಶಿಶ್ ಮಿಶ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಚ್ಛಾಟಿತ ಪಿಲಿಬಿತ್ ಸಂಸದ ವರುಣ್ ಗಾಂಧಿ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರೈತರ ಹತ್ಯೆಯು ಹೃದಯವಿದ್ರಾವಕ ಘಟನೆನೆ. ಇದು ಪ್ರಜಾಪ್ರಭುತ್ವಕ್ಕೆ ಕಳಂಕ. ಈ ಘಟನೆ ಬಗ್ಗೆ ಕೇಂದ್ರ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನ್ಯಾಯಯುತ ವಿಚಾರಣೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಒಡೆತನದ ಎಸ್.ಯುವಿ ವಾಹನವು ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ರೈತರ ಮೇಲೆ ಹರಿಸಿ ರೈತರ ಹತ್ಯೆ ಮಾಡಲಾಯಿತು. ಹಿರಿಯ ನಾಯಕರ ಪ್ರಚೋದನಕಾರಿ ಹೇಳಿಕೆಗಳಿಂದ ಹೇಯ ಕೃತ್ಯ ನಡೆಯಿತು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ತೀರ್ಮಾನವನ್ನು ಮೊದಲೇ ಕೈಗೊಂಡಿದ್ದರೆ ಮುಗ್ದ ರೈತರ ಜೀವ ಉಳಿಸಬಹುದಿತ್ತು. ಹಾಗಾಗಿ ಹುತಾತ್ಮ ರೈತ ಕುಟುಂಬಗಳಿಗೆ 1 ಕೋಟಿ ರೂ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ರೈತರು ಅತ್ಯಂಕ ಕ್ಲಿಷ್ಟಕರ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲೂ ಶಾಂತಿಯುತ ಪ್ರತಿಭಟನೆ ನಡೆಸಿದರು. ಆದ್ದರಿಂದ ಪ್ರಧಾನಿ ಮೋದಿ ಈ ನಿರ್ಧಾರವನ್ನು ಮೊದಲೇ ಕೈಗೊಂಡಿದ್ದರೆ 700ಕ್ಕು ಹೆಚ್ಚು ಮುಗ್ದ ರೈತರ ಜೀವಗಳು ಬಲಿಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ರೈತರ ಮೇಲೆ ಹಾಕಿರುವ ಸುಳ್ಳು ಎಫ್ಐಆರ್ ಹಿಂಪಡೆಯಬೇಕು. ಬೆಳೆಗಳಿಗೆ ಕನಿಷ್ಟ ಬೆಂಬಲಬೆಲೆ ಕಾನೂನುಬದ್ಧಗೊಳಿಸಬೇಕು. ಸಣ್ಣ ರೈತರು ತಮ್ಮ ಬೆಳೆಗಳಿಗೆ ಲಾಭದಾಯಕ ಬೆಲೆ ಪಡೆಯಬೇಕು. ಈ ಬೇಡಿಕೆ ಈಡೇರದಿದ್ದರೆ ಚಳವಳಿ ಕೊನೆಗೊಳ್ಳುವುದಿಲ್ಲ. ರೈತರ ಕೋಪ ಹೆಚ್ಚುತ್ತಾ ಹೋಗಿ ಅದು ಒಂದಲ್ಲ ಒಂದು ರೂಪದಲ್ಲಿ ಹೊರಹೊಮ್ಮುತ್ತದೆ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಸಿ2+50 ಸೂತ್ರವನ್ನು ಎಂಎಸ್.ಪಿ ಆಧರಿಸಿರಬೇಕು ಎಂದು ಆಗ್ರಹಿಸಿದ್ದಾರೆ.
ರೈತರು ತಮ್ಮ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಮತ್ತು ಸಮಯೋಚಿತವಾಗಿ ಪರಿಹರಿಸುತ್ತೀರಿ ಎಂದು ನಿರೀಕ್ಷಿಸುತ್ತಾರೆ. ರೈತರ ಬೇಡಿಕೆಗಳನ್ನು ಒಪ್ಪಿಕೊಂಡು ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಆಗ ನಿಮ್ಮ ಗೌರವ ದೇಶದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದ್ದಾರೆ.


