ಚಳಿಗಾಲ ಅಧಿವೇಶನ ಆರಂಭವಾಗುವ ನವೆಂಬರ್ 29ರಂದು ಸಂಸತ್ತಿಗೆ ಪ್ರತಿನಿತ್ಯ ಟ್ರ್ಯಾಕ್ಟರ್ ಮೆರವಣಿಗೆಯನ್ನು ಹಿಂಪಡೆದಿಲ್ಲ. ಈ ಬಗ್ಗೆ ಭವಿಷ್ಯದ ಮಾರ್ಗ ಮತ್ತು ಅಂತಿಮ ತೀರ್ಮಾನವನ್ನು ಭಾನುವಾರ ತೆಗೆದುಕೊಳ್ಳಲಾಗುವುದು ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ರೈತ ಸಂಘಟನೆಗಳ ಒಕ್ಕುಟ ಸಂಯುಕ್ತ ಕಿಸಾನ್ ಮೋರ್ಚಾ ಚಳಿಗಾಲದ ಅಧಿವೇಶನ ನಡೆಯುವ ಸಂಸತ್ ಗೆ ಪ್ರತಿದಿನ 500 ರೈತರು ಶಾಂತಿಯುತ ಟ್ರ್ಯಾಕ್ಟರ್ ಗಳ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಇದು ನ.29ರಂದು ಆರಂಭವಾಗುತ್ತದೆ ಎಂದು ಹೇಳಿದ್ದಾರೆ.
ಎಂಎಸ್.ಪಿ ಶಾಸನಬದ್ಧ ಗ್ಯಾರೆಂಟಿ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂತೆಗೆದುಕೊಳ್ಳುವ ಬೇಡಿಕೆಗಳಿಗಾಗಿ ಚಳವಳಿ ಮುಂದುವರಿಯುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಸಂಸತ್ತಿಗೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸಬೇಕೆಂಬ ತೀರ್ಮಾನದಿಂದ ಹಿಂದೆ ಸರಿದಿಲ್ಲ. ಮುಂದಿನ ಆಂದೋಲನ ಮತ್ತು ಕನಿಷ್ಠ ಬೆಂಬಲ ಬೆಲೆ ಸಮಸ್ಯೆಗಳ ಕುರಿತು ಭಾನುವಾರ ಸಿಂಘು ಗಡಿಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಸ್.ಕೆ.ಎಂ ಕೋರ್ ಕಮಿಟಿ ಸದಸ್ಯ ದರ್ಶನ್ ಪಾಲ್ ತಿಳಿಸಿದ್ದಾರೆ.
ಸಂಸತ್ತಿಗೆ ಟ್ರ್ಯಾಕ್ಟರ್ ಮೆರವಣಿಗೆಗೆ ಕರೆ ನೀಡುವ ಬಗ್ಗೆ ಎಸ್.ಕೆಎಮ ನಿರ್ಧರಿಸುತ್ತದೆ. ಇಲ್ಲಿಯವರೆಗೂ ಅದನ್ನು ಹಿಂಪಡೆದಿಲ್ಲ. ಕೋರ್ ಕಮಿಟಿ ಭಾನುವಾರ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ರೈತ ಮುಖಂಡ ಜೋಗಿಂದರ್ ಸಿಂಗ್ ಉಗ್ರಾಣ ತಿಳಿಸಿದರು.


