ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಇದುವರೆಗೆ 17 ಮಂದಿ ಮೃತಪಟ್ಟಿದ್ದು 100ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ಮಾಧ್ಯಗಳು ವರದಿ ಮಾಡಿವೆ.
ಅನಂತಪುರ ಜಿಲ್ಲೆಯ ಕದರಿಯಲ್ಲಿ ಕಳೆದ ರಾತ್ರಿ ಬಿದ್ದ ಮಹಾಮಳೆಗೆ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ 3 ಮಂದಿ ಮಕ್ಕಳು ಹಾಗೂ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆ ಸುರಿಯುತ್ತಿರುವುದರಿಂದ ತಿರುಮಲ ಮತ್ತು ಘಾಟಿ ಬೆಟ್ಟದ ಮಾರ್ಗಗಳನ್ನು ಮುಚ್ಚಲಾಗಿದ್ದು, ತಿರುಪತಿ ಸಮೀಪದ ಸ್ವರ್ಣಮುಖಿ ನದಿ ತುಂಬಿ ಹರಿಯುತ್ತಿದೆ. ಬಹಳಷ್ಟು ಮಂದಿ ಮಳೆಗೆ ಸಿಲುಕಿದ್ದು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಹಾಮಳೆಗೆ ಜಲಾಶಯಗಳು ತುಂಬಿ ಹರಿಯತೊಡಗಿವೆ. ಆಂಧ್ರಪ್ರದೇಶದ ರಾಜ್ಯ ಸಾರಿಗೆಯ ಮೂರು ಬಸ್ ಗಳು ಜಖಂಗೊಂಡಿದ್ದು, 12 ಮಂದಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ವಿಪತ್ತು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಧಾರ್ಮಿಕ ಕೇಂದ್ರ ತಿರುಪತಿಯಲ್ಲಿ ನೂರಾರು ಮಂದಿ ಸಿಲುಕಿದ್ದಾರೆ ಎಂದು ವರದಿಗಳು ಹೇಳಿವೆ.


