ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಹೊಸ ಕಲಾವಿದರ ತರಬೇತಿ ಸಂಸ್ಥೆ ಆರಂಭಿಸುವಂತೆ ಕಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಪುನೀತ ನಮನ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಸರ್ಕಾರ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಸ್ವಾಗತಾರ್ಹ. ಅದೇ ರೀತಿ ಹೊಸ ಕಲಾವಿದರಿಗಾಗಿ ತರಬೇತಿ ಸಂಸ್ಥೆ ಆರಂಭಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ರಾಜಕುಮಾರ್ ಅವರ ಕುಟುಂಬ ಸಾಮಾಜಿಕ ಬದ್ಧತೆಗೆ ಹೆಸರುವಾಸಿ. ರಾಜಕುಮಾರ್ ಅವರು ಹಾಕಿಕೊಟ್ಟ ದಾರಿಯಲ್ಲೇ ಪುನೀತ್ ಅವರು ನಡೆದರು. ಅವರು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿ ಎಂದರು.
ಪುನೀತ್ ಅವರ ಸಾವಿನ ಸುದ್ದಿ ಬಂದಾಗ ನನಗೆ ನಂಬಲು ಆಗಲಿಲ್ಲ. ಪುನೀತ್ ಅವರ ಜಿಮ್ ತರಬೇತಿದಾರನೇ ನನಗೂ ತರಬೇತಿದಾರ. ಅವರೇ ಪುನೀತ್ ಅವರಿಗೆ ಏನೋ ಹೆಚ್ಚುಕಮ್ಮಿಯಾಗಿದೆ ಎಂದು ತಿಳಿಸಿ, ಅವಸರದಿಂದ ಹೊರಟ. ನಂತರ ಪುನೀತ್ ಇನ್ನಿಲ್ಲ ಎಂಬ ಸುದ್ದಿ ಖಚಿತವಾಯಿತು. ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ ಎಂದು ತಿಳಿಸಿದರು.
ಪುನೀತ್ ಅವರು ಇನ್ನಿಲ್ಲ ಎಂಬುದನ್ನು ಇಡೀ ನಾಡಿಗೇ ಅರಗಿಸಿಕೊಳ್ಳಲು ಆಗಿಲ್ಲ. ಇನ್ನೂ ಅವರ ಕುಟುಂಬದವರಿಗೆ, ಪತ್ನಿ ಅಶ್ವಿನಿ ಅವರಿಗೆ, ಅವರ ಮಕ್ಕಳಿಗೆ ಹೇಗಾಗಿರಬೇಡ. ಭಗವಂತ ಅವರಿಗೆ ನೋವು ಭರಿಸುವ ಶಕ್ತಿ ನೀಡಲಿ.
ನನಗೂ ಚಲನಚಿತ್ರರಂಗಕ್ಕೂ ಮೊದಲಿಂದಲೂ ನಂಟು. ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶಕನಾಗಿ ಕೆಲಸ ಮಾಡಿದ್ದೆ ಎಂದು ಸ್ಮರಿಸಿಕೊಂಡರು.


