ಸುರತ್ಕಲ್ ನಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್ ಮತ್ತು ಸುಖೇಶ್ ಎಂದು ಗುರುತಿಸಲಾಗಿದೆ.
ಆರೋಪಿಗಳ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341, 147, 148, 323, 504, 506, 153ಎ, 354, 354(ಡಿ) ಮತ್ತು 149ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನವೆಂಬರ್ 15ರಂದು ರಾತ್ರಿ 10 ಗಂಟೆ ಸುಮಾರಿಗೆ ಸುರತ್ಕಲ್ ಬಳಿ ಯುವಕರ ಗುಂಪು ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸ್ನೇಹಿತರನ್ನು ತಡೆದು ಪ್ರಶ್ನಿಸಿ ಥಳಿಸಿತ್ತು ಎಂದು ಹೇಳಲಾಗಿದೆ.
ವಿದ್ಯಾರ್ಥಿನಿಯೊಬ್ಬರು ತನ್ನ ಕಾಲೇಜು ಸಹಪಾಠಿಯನ್ನು ಸಮೀಪದ ಅಪಾರ್ಟ್ ಮೆಂಟ್ ನಲ್ಲಿರುವ ತನ್ನ ಮನೆಗೆ ಬಿಡುವಂತೆ ವಿನಂತಿಸಿದ್ದಳು. ಇದರಿಂದ ಹುಡುಗ ತನ್ನ ಸಹಪಾಠಿ ಹುಡುಗಿಯನ್ನು ಅಪಾರ್ಟ್ ಮೆಂಟ್ ಬಳಿ ಬಿಡುತ್ತಿದ್ದಂತೆಯೇ 5-6 ಯುವಕರ ಗುಂಪು ಪ್ರಶ್ನಿಸಲು ಪ್ರಾರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ಬೇರೆ ಬೇರೆ ಧರ್ಮದವರು ಎಂದು ತಿಳಿದು ಗುಂಪು ಅವರ ಹೆಸರು ಕೇಳಿ ಗದರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಯುವಕರ ಗುಂಪು ಹುಡುಗಿಯ ಜೊತೆಗಿದ್ದ ಹುಡುಗನ ಮೇಲೆ ಹಲ್ಲೆ ನಡೆಸಿ, ಹುಡುಗಿಯನ್ನ ತಳ್ಳಿ ಅನುಚಿತವಾಗಿ ವರ್ತಿಸಿದರು ಎಂದು ಹೇಳಲಾಗಿದೆ.


