ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನವಂಬರ್ 21ರಂದು ಚುನಾವಣೆ ನಡೆಯಲಿದೆ. ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಜಿಲ್ಲೆಯ ಮತದಾರರನ್ನು ಸಂಪರ್ಕಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಅಭ್ಯರ್ಥಿಗಳು ಮತದಾರರನ್ನು ಮನಸ್ಸನ್ನು ಸೆಳೆಯಲು ಹಲವು ರೀತಿಯ ಕಸರತ್ತು ನಡೆಸಿದ್ದಾರೆ. ಆದರೆ ಮತದಾರರು ಮಾತ್ರ ಅಭ್ಯರ್ಥಿಗಳ ಹೇಳಿಕೆ, ಅವರು ನಡೆಸುತ್ತಿರುವ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದು, ಯಾರನ್ನು ಆಯ್ಕೆ ಮಾಡಿದರೆ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂಬ ಬಗೆಗೆ ಚರ್ಚೆ ನಡೆಯುತ್ತಿದೆ.
ಆರು ಮಂದಿ ಅಭ್ಯರ್ಥಿಗಳಲ್ಲಿ ತುರುವೇಕೆರೆಯ ದೇವರಾಜು ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ನಿವೃತ್ತರೇ ಆಗಿದ್ದಾರೆ. ಮತ್ತೊಂದು ವಿಶೇಷವೆಂದರೆ ಲೇಖಕಿ ಶೈಲಾ ನಾಗರಾಜ್ ಅವರನ್ನು ಬಿಟ್ಟರೆ ಉಳಿದವರೆಲ್ಲರೂ ಶಿಕ್ಷಕರು ಎಂಬುದು ಗಮನಿಸಬೇಕು. ಮತ್ತೆ ಇವರಲ್ಲಿ ಸಾಹಿತ್ಯ ಕೃಷಿ ನಡೆಸಿರುವವರು ಶೈಲಾ ನಾಗರಾಜ್ ಮಾತ್ರ. ಪುಟ್ಟಕಾಮಣ್ಣ ಹೋರಾಟದಲ್ಲಿ ಗುರುತಿಸಿಕೊಂಡವರು. ಚಂದ್ರಪ್ಪ ಪ್ರಾಧ್ಯಾಪಕರಾಗಿ ಮತ್ತು ಒಮ್ಮೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಕೆ.ಎಸ್. ಸಿದ್ದಲಿಂಗಪ್ಪ ಕನ್ನಡ ಉಪನ್ಯಾಸಕರು. ಅದನ್ನು ಬಿಟ್ಟರೆ ಸಾಹಿತ್ಯ ಕೃಷಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಇಲ್ಲವೇ ಇಲ್ಲ. ದೇವರಾಜ್ ಹಾಲಿ ಶಿಕ್ಷಕರು. ಮಹಾದೇವಪ್ಪ ನಿವೃತ್ತ ಪೊಲೀಸ್ ಅಧಿಕಾರಿ. ಇದು ಅಭ್ಯರ್ಥಿಗಳ ಸಂಕ್ಷಿಪ್ತ ಮಾಹಿತಿ.
ತುಮಕೂರು ಜಿಲ್ಲೆಯಲ್ಲಿ ತುಮಕೂರು ನಗರ, ಗುಬ್ಬಿ, ಶಿರಾ ಮತ್ತು ತಿಪಟೂರಿನಲ್ಲಿ ಹೆಚ್ಚು ಮತದಾರರು ಇದ್ದಾರೆ. ತುಮಕೂರು ನಗರವನ್ನು ಬಿಟ್ಟರೆ ಗುಬ್ಬಿ ತಾಲ್ಲೂಕಿನಲ್ಲಿ ಕಸಾಪ ಮತಗಳು ಹೆಚ್ಚಾಗಿದ್ದು, ಮೂವರು ಅಭ್ಯರ್ಥಿಗಳ ಪಾಲಾಗಲಿವೆ. ತುಮಕೂರು ನಗರದ ಮತದಾರರು ಒಳ್ಳೆಯವರ ಆಯ್ಕೆ ಹೆಚ್ಚು ಒಲವು ತೋರಿದ್ದಾರೆ.
ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಅವರಲ್ಲಿ ಯಾರು ಬೇಕಾದರೂ ಗೆಲ್ಲಬಹುದು. ಗೆಲುವಿನ ಅಂತರ ಅತ್ಯಂತ ಕಡಿಮೆಯಾಗಿರುತ್ತದೆ.
ಚುನಾವಣೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದೆ. ಒಬ್ಬ ಅಭ್ಯರ್ಥಿಯಂತೂ ಪ್ರತಿರಾತ್ರಿ ನಶೆಯ ಪಾರ್ಟಿ ನಡೆಸಿ ಹಣದ ಹೊಳೆಯನ್ನೇ ಹರಿಸುತ್ತಿದ್ದು, ಮದ್ಯ, ಮಾಂಸದ ಊಟ ಹಾಕಿಸಿ ಮತದಾರರ ಮತ ಪಡೆಯುವ ಕಸರತ್ತು ವರ್ಕೌಟ್ ಆದರೆ ಆ ಅಭ್ಯರ್ಥಿ ಗೆಲುವು ಖಚಿತ ಎನ್ನಲಾಗುತ್ತಿದೆ. ಆತ ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರಿಂದ ‘ಕಾಣಿಕೆ’ ಸ್ವೀಕರಿಸಿರುವ ಕುರಿತ ಚರ್ಚೆ ಜೋರಾಗಿಯೇ ಇದೆ.
ಆ ಅಭ್ಯರ್ಥಿ ‘ನಿಮ್ಮ ಬಗ್ಗೆ ಪುಸ್ತಕ ತರುತ್ತೇನೆಂದು ಹೇಳಿ ಲಕ್ಷ ಲಕ್ಷ ರೂಪಾಯಿ ಹಣ ಪೀಕಿ ಪುಸ್ತಕವೂ ತರದೇ ವಂಚಿಸಿರುವ ಮತ್ತು ಹೀಗೆ ಮೂರ್ನಾಲ್ಕು ಮಂದಿಗೆ ತಿರುಪತಿ ಪಂಗನಾಮ ಹಾಕಿರುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಇಂಥವರನ್ನು ಅಧ್ಯಕ್ಷ ಸ್ಥಾನಕ್ಕೆ ತಂದರೆ ಕನ್ನಡ ಸಾಹಿತ್ಯ ಪರಿಷತ್ ಹೆಸರಿಗೆ ಕಳಂಕ ತರುತ್ತಾರೆ. ಹಾಗಾಗಿ ಸಮರ್ಥರನ್ನು ಆಯ್ಕೆ ಮಾಡುವಂತೆಯೂ ಪ್ರಜ್ಞಾವಂತ ಮತದಾರರು ಮನವಿ ಮಾಡುತ್ತಿದ್ದಾರೆ.
ಹೌದು, ಕನ್ನಡ ಸಾಹಿತ್ಯ ಪರಿಷತ್ ನಾಡಿನ ಜನರ ನಾಡಿಮಿಡಿತಕ್ಕೆ ಸ್ಪಂದಿಸಬೇಕು. ಕೇವಲ ಸಮ್ಮೇಳನಗಳನ್ನು ನಡೆಸಿ ಒಂದಷ್ಟು ಹಣ ಮಾಡುವ ಉದ್ದೇಶಕ್ಕಷ್ಟೇ ಸೀಮಿತವಾಗಬಾರದು. ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಕನ್ನಡ ನಾಡು-ನುಡಿ, ನೆಲ-ಜಲದ ಪ್ರಶ್ನೆ ಬಂದಾಗ ಬೀದಿಗೆ ಇಳಿದು ಹೋರಾಟ ಮಾಡುವುದಕ್ಕೂ ಹಿಂಜರಿಯಬಾರದು. ಗಡಿನಾಡು ಅಭಿವೃದ್ಧಿಗೆ ಸರ್ಕಾರದ ಮೇಲೆ ಒತ್ತಡ ತರುವಂಥ ಕೆಲಸವನ್ನು ಮಾಡಬೇಕು. ಹಾಗಾದಾಗ ಮಾತ್ರ ಕನ್ನಡ ಸಾಹಿತ್ಯ ಪರಿಷತ್ ಗೆ ಒಂದಷ್ಟು ಹೆಸರು ಬರಲು ಸಾಧ್ಯ. ಇಲ್ಲದಿದ್ದರೆ ಕನ್ನಡ ಸಾಹಿತ್ಯ ಪರಿಷತ್ ಉದ್ದೇಶವೇ ಮಣ್ಣುಪಾಲಾಗುತ್ತದೆ.
ಕನ್ನಡ ಸಾಹಿತ್ಯ ಪರಿಷತ್ ಗೆ ಅಧ್ಯಕ್ಷರಾಗಿ ಆಯ್ಕೆಯಾದವರು ಜನರಿಗೆ ಸ್ಪಂದಿಸುವ ಗುಣ ಹೊಂದಿರಬೇಕು. ಪರಿಷತ್ ನ್ನು ಚನ್ನಾಗಿ ಇಟ್ಟುಕೊಂಡು ಸದಾ ಕನ್ನಡಪರ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳವರಾಗಿರಬೇಕು. ಅಂಥ ಗುಣವುಳ್ಳವರು ಅಧ್ಯಕ್ಷರಾದರೆ ತುಮಕೂರು ಜಿಲ್ಲೆಯ ಕೀರ್ತಿ ಇತರೆ ಜಿಲ್ಲೆಗಳಿಗೂ ಹರಡಿ ಒಳ್ಳೆಯ ಹೆಸರು ಬರುವಂತೆ ಆಗುತ್ತದೆ. ಕನ್ನಡ ಚಟುವಟಿಕೆಗಳನ್ನೇ ಕೊಲ್ಲುವಂತಹ ಮನಸ್ಥಿತಿ ಇರುವವರು ಅಧ್ಯಕ್ಷರಾದರೆ ಅದು ಕನ್ನಡ ಸಾಹಿತ್ಯ ಪರಿಷತ್ ಆಗದ ಕಸ ಪರಿಷತ್ ಆಗುತ್ತದೆ. ಈ ಬಗ್ಗೆ ಮತದಾರರು ಎಚ್ಚರಿಕೆಯಿಂದ ಮತ ಹಕ್ಕು ಚಲಾಯಿಸಿ ಸಮರ್ಥರನ್ನು ಆಯ್ಕೆ ಮಾಡಬೇಕು.
ಆಡಂಬರಕ್ಕಿಂತ ಸದ್ದು ಮಾಡದೇ ಕೆಲಸ ಮಾಡುವವರಿಗೆ ಮತ್ತು ಕುಡಿತ ಕೆಡುಕುಗಳಿಗಿಂತ ಒಳ್ಳೆಯ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ವ್ಯಕ್ತಿಯನ್ನು ಮತದಾರರು ಆಯ್ಕೆ ಮಾಡಿದರೆ ಒಳ್ಳೆಯದು.
ಕೆ.ಈ.ಸಿದ್ದಯ್ಯ


