ರಾಜ್ಯದಲ್ಲಿ ಪದವಿ/ಪೂರ್ವ ಕೋರ್ಸ್ ಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಡ್ಡಾಯ ಭಾಷೆಯನ್ನಾಗಿ ಮಾಡುವ ಕರ್ನಾಟಕ ಸರ್ಕಾರದ ಆದೇಶದ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಹೈಕೋರ್ಟ್ ಕೇಳಿದೆ.
ರಾಜ್ಯ ಸರ್ಕಾರ ಆಗಸ್ಟ್ 7ಮತ್ತು ಸೆಪ್ಟೆಂಬರ 15ರಂದು ಹೊರಡಿಸಿ ಎರಡು ಭಿನ್ನ ಆದೇಶಗಳಲ್ಲಿ ಪದವಿ ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಎರಡು ಭಾಷೆಗಳಲ್ಲಿ ಒಂದನ್ನು ಕಡ್ಡಾಯವಾಗಿ ಕಲಿಸುವ ನಿರ್ಧಾರವನ್ನು ಪ್ರಕಟಿಸಿದೆ.
ಸರ್ಕಾರದ ಆದೇಶಗಳ ವಿರುದ್ದ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮತ್ತು ಇತರ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ವಿಷಯದ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸುವಂತೆ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೂಚಿಸಿದೆ.
ಪ್ರಕರಣದ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಲಾಗಿದೆ.
ಅದರೆ ಕನ್ನಡಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಸರ್ಕಾರದ ನೀತಿ ನಿರ್ಧಾರವಾಗಿದೆ ಎಂದು ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಪದವಿಪೂರ್ವ ಹಂತದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಚೌಕಟ್ಟಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಮಾಡಿದ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಕನ್ನಡ ಕಲಿಕೆಯ ಎರಡು ಹಂತಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಒಂದನ್ನು ಪದವಿ ಕೋರ್ಸ್ ಗಳಿಗೆ ಸೇರುವ ಮೊದಲು ಕನ್ನಡ ಅಧ್ಯಯನ ಮಾಡಿದವರಿಗೆ ವಿನ್ಯಾಸಗೊಳಿಸಿದ್ದರೆ, ಇನ್ನೊಂದು ಕನ್ನಡ ಜ್ಞಾನವಿಲ್ಲದ ಹೊರ ರಾಜ್ಯದಿಂದ ಯುಜಿ ಕೋರ್ಸ್ ಗಳಿಗೆ ದಾಖಲಾಗುವವರಿಗೆ ವಿನ್ಯಾಸಗೊಳಿಸಲಾಗಿದೆ. ಎರಡನೆಯದು ಕ್ರಿಯಾತ್ಮಕ ಕನ್ನಡವಾಗಿದೆ. ವಿದ್ಯಾರ್ಥಿಗಳು ಸಂವಹನ ನಡೆಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.


