ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಐವರು ಮೃತಪಟ್ಟಿದ್ದಾರೆ. ನೂರಾರು ಮನೆಗಳಿಗೆ ಹಾನಿ ಆಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಮತ್ತೆ ಮೂರು ದಿನಗಳ ಕಾಲ ಭಾರೀ ಮತ್ತು ಅತಿ ಭಾಋಈ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ರಾಜ್ಯಾದ್ಯಂತ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ. 538 ಗುಡಿಸಲು ಮತ್ತು ನಾಲ್ಕು ಮನೆಗಳಿಗೆ ಹಾನಿಯಾಗಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ರಾಮಚಂದ್ರನ್ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 11ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವೆಂಬರ್ 11ರ ವೇಳೆಗೆ ವಾಯುಭಾರ ಕುಸಿತ ಮತ್ತಷ್ಟು ತೀವ್ರಗೊಂಡು ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಮಳೆಯಿಂದ ರಸ್ತೆಗಳು ಪ್ರವಾಹಕ್ಕೆ ಕಾರಣವಾಗಬಹುದು. ತಗ್ಗು ಪ್ರದೇಶಗಳು ಜಲಾವೃತವಾಗುವ, ನೀರಿನಿಂದ ತುಂಬಿಕೊಳ್ಳಲಿವೆ ಎಂದು ಹೇಳಿದೆ.
ಮಳೆಯ ಪರಿಣಾಮ ಸಂಚಾರ ವ್ಯತ್ಯಯವಾಗಿದೆ. ಕಟ್ಟಡಗಳಿಗೆ ಹಾನಿಯಾಗಿದೆ. ಭೂಕುಸಿತ, ಮಣ್ಣಿನ ಕುಸಿತಗಳು ಕಂಡುಬಂದಿವೆ. ಸಾಕಷ್ಟು ಬೆಳೆಗೂ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ನಗರದಲ್ಲಿನ ಜಲಾವೃತ ಪರಿಸ್ಥಿತಿ ಬಗ್ಗೆ ಮದ್ರಾಸ್ ಹೈಕೋರ್ಟ್ ಚೆನ್ನೈ ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ. ಮಳೆಗಾಲದ ಸಮಯದಲ್ಲಿ ಪ್ರವಾಹವನ್ನು ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಹೈಕೋರ್ಟ್ ಹೇಳಿದೆ. 2015ರ ಪ್ರವಾಹದ ನಂತರ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿರುವ ನ್ಯಾಯಾಲಯ ಪರಿಸ್ಥಿತಿ ಹತೋಟಿಗೆ ತರದಿದ್ದಲ್ಲಿ ಸ್ವಯಂಪ್ರೇರಿತ ಪ್ರಕ್ರಿಯೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ.
ಪ್ರತಿಕೂಲ ಹವಾಮಾನದ ಕಾರಣ ನವೆಂಬರ್ 11ರ ವರೆಗೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಲ್ಲಿರುವ ಮೀನುಗಾರರು ಆಗ್ನೇಯ ಮತ್ತು ನೈರುತ್ಯ ಬಂಗಾಳ ಕೊಲ್ಲಿ, ಕೊಮೊರಿನ್ ಪ್ರದೇಶ, ಮುನ್ನಾರ್ ಕೊಲ್ಲಿ ತೀರದ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ತಮಿಳುನಾಡಿನ ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.