ಸುಳ್ಳು ಹೇಳುವುದನ್ನು ನಿಲ್ಲಿಸದಿದ್ದರೆ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರ ಕತ್ತು ಮುರಿಯಲು ಮತ್ತು ನಾಲಿಗೆ ಕಿತ್ತುಹಾಕಲು ಟಿಆರ್.ಎಸ್ ಹಿಂಜರಿಯುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ನೀವು ರೈತರನ್ನು ಪ್ರಚೋದಿಸಿದರೆ ಕೆಸಿಆರ್ ಸುಮ್ಮನಿರುವುದಿಲ್ಲ. ನನ್ನನ್ನು ಬಂಧನ ಮಾಡ್ತೀರಾ? ನೀವು ಕೆಸಿಆರ್ ಅವರನ್ನು ಮುಟ್ಟಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದು ನಿಲ್ಲಿಸಬೇಕು. ಆಧಾರರಹಿತ ಆರೋಪಗಳನ್ನು ನಿಲ್ಲಿಸದಿದ್ದರೆ ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರೈತರು ಬೆಳೆದ ಭತ್ತವನ್ನು ಖರೀದಿಸುವುದಾಗಿ ಸಂಜಯ್ ಹೇಳಿದ್ದಾರೆ. ದೆಹಲಿಯ ಯಾವುದೇ ಮುಖಂಡರು ಭತ್ತ ಖರೀದಿಸುವುದಿಲ್ಲ. ಬಿಜೆಪಿ ಬೇಜವಾಬ್ದಾರಿ ಭರವಸೆ ನೀಡುತ್ತಿದೆ. ಇದು ಸಂಜಯ್ ಅವರ ಮೂರ್ಖತನದ ಪರಮಾವಧಿ ಎಂದು ಟೀಕಿಸಿದರು.
ಸಂಜಯ್ ಮಾಡಿದ ಎಲ್ಲಾ ಅವಮಾನ ಮತ್ತು ನಿಂದನೆಗಳನ್ನು ಸಹಿಸಿಕೊಂಡು ಸುಮ್ಮನಿದ್ದೇನೆ. ಏಳು ವರ್ಷದಿಂದ ಸುಮ್ಮನಿದ್ದೆ. ನನ್ನ ತಾಳ್ಮೆ ಪರೀಕ್ಷಿಸಬೇಡಿ. ಆರೋಪ ನಿಲ್ಲಿಸದಿದ್ದರೆ ನಾವು ನಿಮ್ಮ ಕುತ್ತಿಗೆ ಬಗ್ಗಿಸುವುದು ಮಾತ್ರವಲ್ಲ ಮುರಿದು ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸಚಿವರ ಪುತ್ರ ರೈತರ ಮೇಲೆ ಕಾರು ಓಡಿಸುತ್ತಾರೆ. ಮುಖ್ಯಮಂತ್ರಿಗಳು ಪ್ರತಿಭಟನೆ ನಡೆಸುವ ರೈತರನ್ನು ಕೊಲ್ಲಲು ಹೇಳುತ್ತಾರೆ. ಇಂತಹ ಬಿಜೆಪಿ ನಾಯಕರು ರೈತರ ಕಲ್ಯಾಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗೇಲಿಮಾಡಿದರು.
ನನ್ನನ್ನು ಜೈಲಿಗೆ ಕಳಿಸಲು ಪ್ರಯತ್ನಿಸಿದರೆ ಸಂಜಯ್ ಬದುಕಲು ಸಾಧ್ಯವೆ? ನನ್ನನ್ನು ಮುಟ್ಟಲು ಪ್ರಯತ್ನಿಸಿದರೆ ಟಿಆರ್.ಎಸ್. ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ರಾಜ್ಯದಲ್ಲಿ ನಾವು ಪ್ರಬಲರಾಗಿದ್ದು ಬಿಜೆಪಿಯನ್ನು ಪ್ರತಿ ಬೀದಿಯಿಂದಲೂ ಓಡಿಸಬಲ್ಲೆವು ಎಂದು ಕೆಸಿಆರ್ ಹೇಳಿದರು.
ಸಂಜಯ್ ರೈತರ ಬದುಕನ್ನು ನಾಶ ಮಾಡಲು ಬಯಸಿದರೆ ಅದನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಬಂಡಿ ಸಂಜಯ್ ಕರೀಂನಗರ ಸಂಸದರು. ಅವರಿಂದ ರಾಜ್ಯಕ್ಕೆ ಒಂದು ಪೈಸೆಯೂ ಕೂಡ ಬಂದಿಲ್ಲ. ಕೇಂದ್ರ ಸಚಿವರೂ ತೆಲಂಗಾಣಕ್ಕೆ ಏನನ್ನೂ ಮಾಡಿಲ್ಲ. ಹಾಗಾಗಿ ಕೇಂದ್ರದ ವೈಫಲ್ಯಗಳ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ರಾವ್ ತಿಳಿಸಿದರು.