ಛತ್ತೀಸ್ ಗಡದ ಸುಕ್ಮಾ ಜಿಲ್ಲೆ ಅರೆಸೇನಾ ಪಡೆಯ ಶಿಬಿರದಲ್ಲಿ ಸಹೋದ್ಯೋಗಿ ಹಾರಿಸಿದ ಗುಂಡಿಗೆ ನಾಲ್ವರು ಸಿಆರ್.ಪಿಎಫ್ ಯೋಧರು ಮೃತಪಟ್ಟಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಮೂವರು ಯೋಧರಲ್ಲಿ ಇಬ್ಬರನ್ನು ಚಿಕಿತ್ಸೆಗಾಗಿ ರಾಯ್ ಪುರಕ್ಕೆ ವಿಮಾನದಲ್ಲಿ ರವಾನಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
“ರಾಯ್ ಪುರದಿಂದ 450 ಕಿಲೋ ಮೀಟರ್ ದೂರದ ನಕ್ಸಲ್ ಪೀಡಿತ ಸುಕ್ಮಾದ ಕೊಂಟಾ ಬ್ಲಾಕ್ ನಲ್ಲಿರುವ ಲಿಂಗಂಪಲ್ಲಿ ಕ್ಯಾಂಪ್ ನಲ್ಲಿ ಮುಂಜಾನೆ 3.35ರ ಸುಮಾರಿನಲ್ಲಿ ಈ ಘಟನೆ ನಡೆದಿದೆ.
ಸಿಆರ್.ಪಿಎಫ್ ಜವಾನ್ ರಿತೇಶ್ ರಂಜನ್ ನವೆಂಬರ್ 8ರಂದು ಮುಂಜಾನೆ 4 ರ ಸುಮಾರಿಗೆ ತನ್ನ ಸೆಂಟ್ರಿ ಕೆಲಸ ಆರಂಭಿಸಬೇಕಿತ್ತು. ಮುಂಜಾನೆ 3.25ರ ಸುಮಾರಿಗೆ ಎದ್ದ ರಿತೇಶ್ ಮಲಗಿದ್ದ ತನ್ನ ಸಹೋದ್ಯೋಗಿಗಳ ಮೇಲೆ ತನ್ನ ಬಳಿ ಇದ್ದ ಬ್ಯಾರಕ್ ನಿಂದ ಗುಂಡು ಹಾರಿಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.
ಏಳು ಜನರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತರನ್ನು ಧಂಜಿ, ರಾಜೀಬ್ ಮೊಂಡಲ್, ರಾಜಮಣಿ ಕುಮಾರ್ ಯಾದವ್ ಮತ್ತು ಧರ್ಮೇಂದ್ರ ಕೆ.ಆರ್.ಸಿಂಗ್ ಎಂದು ಗುರುತಿಸಲಾಗಿದೆ. ಮೃತಪಟ್ಟ ನಾಲ್ವರಲ್ಲಿ ಮೂವರು ಬಿಹಾರದವರು ಮತ್ತು ಒಬ್ಬರು ಪಶ್ಚಿಮ ಬಂಗಾಳದವರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಮೂವರನ್ನು ಧನಂಜಯ್ ಕುಮಾರ್, ಧರ್ಮಾತ್ಮ ಕುಮಾರ್ ಮತ್ತು ಮಲಯ ರಂಜನ್ ಮಹಾರಾಣಾ ಎಂದು ಗುರುತಿಸಲಾಗಿದ್ದು ಭದ್ರಾಚಲಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಂಜನ್ ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದು, ಗುಂಡು ಹಾರಿಸುವ ಹಿಂದಿನ ಕಾರಣಗಳನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ರಂಜನ್ ತಮ್ಮ ಸಹೋದ್ಯೋಗಿಗಳೊಂದಿಗೆ ಜಗಳವಾಡಿದ್ದರು. ಅದು ಕ್ಷುಲ್ಲಕವಾಗಿತ್ತು ಎಂದು ಲಿಂಗಂಪಲ್ಲಿ ಶಿಬಿರದ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ವಶಕ್ಕೆ ಪಡೆದ ನಂತರ ರಂಜನ್ ಮಾತನಾಡಲು ನಿರಾಕರಿಸಿದ್ದು ಅವರ ರೈಫಲ್ ವಶಕ್ಕೆ ತೆಗೆದುಕೊಂಡಿದ್ದೇವೆ. ಅವರು ಟ್ರಿಗರ್ ಎಳೆಯುವ ಮೊದಲು ಏನಾಯಿತು ಎಂಬುದನ್ನು ಕಂಡುಹಿಡಿಯಲು ಅವರ ವಸ್ತುಗಳು ಮತ್ತು ಪೋನ್ ವಿವರ ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.