ದೆಹಲಿಯಲ್ಲಿಂದು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಮಂಗಳೂರಿನ ಹರೇಕಳ ಹಾಜಬ್ಬ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಪಕ್ಷಬೇಧ ಮರೆತು ಎಲ್ಲರೂ ಹಾಜಬ್ಬ ಸಾಧನೆಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಹಾಜಬ್ಬ ಅವರ ಶೈಕ್ಷಣಿಕ ಕ್ರಾಂತಿಯನ್ನು ಕೊಂಡಾಡಿದ್ದಾರೆ. ಹಾಜಬ್ಬ ಅವರನ್ನು ಅಕ್ಷರಸಂತ ಎಂದು ಕರೆದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ” ಮಾನ್ಯ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸಮಾಜ ಕಾರ್ಯಕ್ಕಾಗಿ ಶ್ರೀ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪಶಸ್ತಿ ಪ್ರದಾನ ಮಾಡಿದರು. ಕರ್ನಾಟಕದ ಮಂಗಳೂರಿನಲ್ಲಿ ಕಿತ್ತಳೆ ಮಾರಾಟಗಾರರಾದ ಹಾಜಬ್ಬ ಅವರು ಕಿತ್ತಳೆ ಮಾರಾಟದ ವ್ಯವಹಾರದಿಂದ ಬಂದ ಹಣವನ್ನು ಉಳಿಸಿ ತಮ್ಮ ಗ್ರಾಮದಲ್ಲಿ ಶಾಲೆಯನ್ನು ನಿರ್ಮಿಸಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ “ಅಕ್ಷರ ಸಂತರೆಂದು ಖ್ಯಾತರಾದ ಶ್ರೀ ಹರಕೇಳ ಹಾಜಬ್ಬ ಅವರು ಹೆಮ್ಮೆಯ ಕನ್ನಡಿಗ. ಕಿತ್ತಳೆ ಹಣ್ಣು ಮಾರಿ, ಕಚೇರಿಯಿಂದ ಕಚೇರಿಗೆ ಅಲೆದು ಬಡ ಮಕ್ಕಳಿಗಾಗಿ ಶಾಲೆ ಕಟ್ಟಿಸಿದ ಅವರ ಸ್ಫೂರ್ತಿದಾಯಕ ಕಥೆಯನ್ನು ನಾವು ಮರೆಯುವಂತಿಲ್ಲ. ಪದ್ಮಶ್ರೀ ಗೌರವ ಪುರಸ್ಕಾರಕ್ಕೆ ಪಾತ್ರರಾದ ಅವರಿಗೆ ತುಂಬು ಹೃದಯದ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ “ಹಾಜಬ್ಬ ಅವರ ಸಾಧನೆ ಎಲ್ಲರಿಗೂ ಮಾದರಿ. ಜೀವನೋಪಾಯಕ್ಕೆ ಬುಟ್ಟಿಯಲ್ಲಿ ಕಿತ್ತಳೆ ಮಾರುವ ಕಾಯಕ ಆಶ್ರಯಿಸಿದ್ದರೂ ಬಡ ಮಕ್ಕಳಿಗೆ ಶಾಲೆ ತೆರೆಯುವಲ್ಲಿ ಯಶಸ್ಸು ಕಂಡ ಅವರ ಅವಿರತ ಪರಿಶ್ರಮ ಸಾಧನೆ ಅನುಪಮವಾದುದು’ ಎಂದು ಬಣ್ಣಿಸಿದ್ದಾರೆ.
ಮಾಜಿ ಸಚಿವ ಯು.ಟಿ.ಖಾದರ್ “ನನ್ನ ಕ್ಷೇತ್ರದ ಹೆಮ್ಮೆ, ಅಕ್ಷರ ಸಂತ ಹರೇಕಳ ಹಾಜಬ್ಬರವರಿಗೆ ಘನವೆತ್ತ ರಾಷ್ಟ್ರಪತಿಗಳು ದೆಹಲಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಹಾಜಬ್ಬರವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತಾ ಅವರನ್ನು ಕ್ಷೇತ್ರದ ಜನತೆಯ ಪರವಾಗಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಕಾರ್ಯಕ್ರಮಕ್ಕೆ ತಯಾರಿ ನಡೆಸಲಾಗಿತ್ತು. ಆದರೆ ಹಾಜಬ್ಬರವರ ಕೋರಿಕೆಯ ಮೇರೆಗೆ ಆ ಕಾರ್ಯಕ್ರಮ ಕೈ ಬಿಟ್ಟು ಅವರದೇ ಶಾಲೆಯಲ್ಲಿ ಅವರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.