ಲಖಿಂಪುರ್ ಖೇರಿ ರೈತರ ಹತ್ಯಾ ಪ್ರಕರಣದ ಕುರಿತು ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ರಚಿಸಿರುವ ನ್ಯಾಯಾಂಗ ಆಯೋಗದ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸುವಂತೆ ಸೂಚಿಸಿದೆ.
ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರ ನೇತೃತ್ವದ ನ್ಯಾಯಾಂಗ ಆಯೋಗವನ್ನು ಲಖಿಂಪುರ್ ಖೇರಿ ರೈತರ ಹತ್ಯಾ ಪ್ರಕರಣದ ತನಿಖೆಗೆ ನೇಮಕ ಮಾಡಿತ್ತು.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮ ಕೋಹ್ಲಿ ನೇತೃತ್ವದ ತ್ರಿಸದಸ್ಯ ಪೀಠ, ಬೇರೆ ರಾಜ್ಯದ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಸಲಹೆ ನೀಡಿದೆ.
ಈ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಮಿಶ್ರಣ ಮಾಡುವಂತಿಲ್ಲ. ರೈತರ ಹತ್ಯಾ ಪ್ರಕರಣದ ತನಿಖೆಯನ್ನು ನಿಯಂತ್ರಿಸಲು ಬೇರೆ ಬೇರೆ ರಾಜ್ಯಗಳ ನ್ಯಾಯಾಧೀಶರನ್ನು ನೇಮಕ ಮಾಡುತ್ತೇವೆ. ಲಖಿಂಪುರ್ ಖೇರಿ ಪ್ರಕರಣದ ಮೇಲುಸ್ತುವಾರಿಗೆ ನಿಮ್ಮ ರಾಜ್ಯ ರಚಿಸಿರುವ ನ್ಯಾಯಾಂಗ ಆಯೋಗದ ಮೇಲೆ ನಮಗೆ ನಂಬಿಕೆ ಇಲ್ಲ. ಪ್ರಕರಣದ ತನಿಖಗೆ ಮೇಲುಸ್ತುವಾರಿಗಳನ್ನಾಗಿ ಪಂಜಾಬ್ ಮತ್ತು ಹರ್ಯಾಣದ ಹೈಕೋರ್ಟ್ ನ್ಯಾಯಮೂರ್ತಿ ಕುಮಾರ್ ಜೈನ್ ಅಥವಾ ನ್ಯಾಯಮೂರ್ತಿ ರಂಜಿತ್ ಸಿಂಗ್ ಅವರನ್ನು ನೇಮಕ ಮಾಡಬೇಕು ಎಂದು ಹೇಳಿದೆ.
ಈ ಹಿಂದೆಯೂ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರು ರೈತರ ಹತ್ಯಾ ಪ್ರಕರಣವನ್ನು ನಿರ್ವಹಣೆ ಮಾಡಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಈಗ ಎರಡು ಎಫ್ಐಆರ್ ಗಳಿದ್ದು ಒಂದು ಎಫ್ಐಆರ್ ಆಧಾರದ ಮೇಲೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಎಫ್ಐಆರ್ ನಂ.220ರಡಿ ಒಬ್ಬ ಆರೋಪಿಯನ್ನು ರಕ್ಷಿಸಲು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೀಠ ಹೇಳಿತು.
ನಮಗೆ ಯಾವುದೇ ಮಾತುಗಳು ಬೇಕಿಲ್ಲ. ನೀವು ರಾಜ್ಯದಿಂದ ಪತ್ತೆ ಮಾಡಿ ಇಲ್ಲವೇ ನಾವೇ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಬಹುದು. ನಾವು ಶುಕ್ರವಾರ ಇದನ್ನು ಮಾಡುತ್ತೇವೆ ಎಂದು ಸಿಐಜೆ ರಮಣ ಹೇಳಿದರು.