ಕೇಂದ್ರ ಸರ್ಕಾರಕ್ಕೆ ಹತ್ತಿರವಾಗಿರುವ ಅದಾನಿ ಮತ್ತು ಅಂಬಾನಿಗಳಿಗೆ ನೋಟು ಅಮಾನ್ಯೀಕರಣದ ಬಗ್ಗೆ ಮೊದಲೇ ತಿಳಿದಿತ್ತು ಎಂದು ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಾವತ್ ಆಡಿರುವ ಮಾತುಗಳಿರುವ ವಿಡಿಯೋ ವೈರಲ್ ಆಗಿರುವುದನ್ನು ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ರಾಜಸ್ಥಾನದ ಕೋಟಾದ ಆಗಿನ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಾವತ್ ವಿಡಿಯೋದಲ್ಲಿ ಹೇಳಿರುವಂತೆ “ಅದಾನಿ, ಅಂಬಾನಿ ಮತ್ತು ಇತರರಿಗೆ ನೋಟು ರದ್ದತಿ ಬಗ್ಗೆ ಮೊದಲೇ ತಿಳಿದಿತ್ತು. ಅವರಿಗೆ ಸುಳಿವು ಸಿಕ್ಕಿದ್ದರಿಂದ ಅದರಂತೆ ವ್ಯವಸ್ಥೆ ಮಾಡಿದ್ದರು. ನೀವು (ಸರ್ಕಾರ) ಅಗತ್ಯಕ್ಕೆ ಅನುಗುಣವಾಘಿ ಹೊಸ ಕರೆನ್ಸಿ ಮುದ್ರಿಸಿರಬೇಕು” ಎಂದಿದ್ದಾರೆ.
ಕರೆನ್ಸಿ ನಿಷೇಧವು ಯೋಜಿತವಲ್ಲ ಎಂದು ಹೇಳಿರುವ ರಾಜಾವತ್ ಅದನ್ನು ಹಂತಹಂತವಾಗಿ ಜಾರಿಗೊಳಿಸಬಹುದಾಗಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ನೋಟು ಅಮಾನ್ಯೀಕರಣದ ಐದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿ, ಇದೊಂದು ವಿಪತ್ತು ಎಂದು ಕರೆದಿದ್ದಾರೆ. ಸರ್ಕಾರದ ಈ ಹೆಜ್ಜೆ ಯಶಸ್ವಿಯಾಗಿದ್ದರೆ, ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ ಮತ್ತು ಕಪ್ಪು ಹಣ ದೇಶಕ್ಕೆ ಮರಳಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ನೋಟುಬಂಧಿ ಯಶಸ್ವಿಯಾಗಿದ್ದರೆ, ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ. ಕಪ್ಪು ಹಣ ಏಕೆ ವಾಪಸ್ ಬಂದಿಲ್ಲ? ಆರ್ಥಿಕತೆ ಏಕೆ ನಗದು ರಹಿತವಾಗಿ ಹೋಗಿಲ್ಲ? ಭಯೋತ್ಪಾದನೆಗೆ ಏಕೆ ಹೊಡೆತ ಬಿದ್ದಿಲ್ಲ? ಬೆಲೆ ಏರಿಕೆ ಏಕೆ ಕಡಿಮೆ ಆಗಿಲ್ಲ. ಇವೆಲ್ಲವಕ್ಕು ಲಗಾಮು ಹಾಕಿದ್ದೀರಾ? ಎಂದು ಡಿಮಾನಿಟೈಸೇಷನ್ ಡಿಸಾಸ್ಟರ್ ಎಂಬ ಹ್ಯಾಶ್ ಟ್ಯಾಗ್ ಬಳಿಸಿ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ನೋಟು ಅಮಾನ್ಯೀಕರಣವು ಜನರ ಹಿತಾಸಕ್ತಿಯಲ್ಲ ಮತ್ತು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದು ಮೋದಿ ಸರ್ಕಾರ ಇದನ್ನು ಪದೇ ಪದೇ ನಿರಾಕರಿಸಿಕೊಂಡು ಬರುತ್ತಲೇ ಇದೆ.
ನೋಟು ಅಮಾನ್ಯೀಕರಣದಿಂದ ಆರ್ಥಿಕತೆ ಹಿನ್ನಡೆಗೆ ಒಳಗಾಗಿದೆ. ಬಡವರಿಗೆ ಹಾನಿಯಾಗಿದೆ. ಅನೌಪಚಾರಿಕ ವಲಯವು ಕ್ಷೀಣಿಸಿದೆ ಕಪ್ಪುಹಣವನ್ನು ತಡೆಯಲು ಆಗಿಲ್ಲ. ಆದರೆ ಶ್ರೀಮಂತರು ಶ್ರೀಮಂತರಾಗಿದ್ದಾರೆ. ಆರ್ಥಿಕತೆಯಲ್ಲಿನ ನಗದು ಈಗ ಅತ್ಯಧಿಕವಾಗಿದೆ! ಕೇವಲ ಒಬ್ಬ ವ್ಯಕ್ತಿಯ ಹುಚ್ಚಾಟಕ್ಕಾಗಿ ದೇಶವನ್ನು ಪಾತಾಳಕ್ಕೆ ತಳ್ಳಿದ ಜವಾಬ್ದಾರಿಯನ್ನು ಈ ಸರ್ಕಾರ ಹೊರಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.