ರಾಜ್ಯ ಮತ್ತು ದೇಶದಲ್ಲಿ ಧರ್ಮ ರಾಜಕೀಯ ನಡೆಯುತ್ತಿದ್ದು ಇದರ ವಿರುದ್ಧ ಜಾತ್ಯತೀತ ರಾಜಕೀಯದ ಮೂಲಕ ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ನಾಯಕ ಹ್ಯಾರೀಸ್ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಳಗೊಂಡಿದೆ. ಎಲ್ಲ ಜನವಿಭಾಗಗಳು ಕಾಂಗ್ರೆಸ್ ನಲ್ಲಿದ್ದು ಜಾತ್ಯತೀತ ನೆಲೆಯ ಮೇಲೆ ರಾಜಕೀಯ ಮಾಡಿಕೊಂಡು ಬರುತ್ತಿದೆ. ಎಲ್ಲ ವರ್ಗದ ಜನರನ್ನು ಸೇರಿಸಿಕೊಂಡು ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.
ಅಬ್ದುಲ್ ಜಬ್ಬರ್ ದಾವಣಗೆರೆಯವರು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದವರು. ಇವರನ್ನು ರಾಜ್ಯ ಅಲ್ಪಸಂಖ್ಯಾತರ ಘಟಕಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜಬ್ಬರ್ ನವೆಂಬರ್ 16ರಂದು ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸುವರು. ನಂತರ ದಲಿತರು, ಅಲ್ಪಸಂಖ್ಯಾತರು, ಅಂಚಿನ ಜನರು ಮತ್ತು ಹಿಂದುಳಿದವರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಧರ್ಮದ ಮೇಲೆ ಸರ್ಕಾರ ನಡೆಸಲಾಗುತ್ತಿದೆ. ಇದು ಸರಿಯಲ್ಲ ಸರ್ಕಾರದ ವೈಫಲ್ಯಗಳು ಮತ್ತು ಜನವಿರೋಧಿ ನಿಲುವುಗಳ ವಿರುದ್ಧ ಎಲ್ಲಾ ಜಾತ್ಯತೀತರನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಸಿ.ಎಂ. ಇಬ್ರಾಹಿಂ ಅವರು ನಮ್ಮ ನಾಯಕರು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿದೆ. ಆದರೂ ಪ್ರಜಾಪ್ರಭುತ್ವದಲ್ಲಿ ಸಣ್ಣಪುಟ್ಟ ಭಿನ್ನ ಅಭಿಪ್ರಾಯಗಳು ಸಾಮಾನ್ಯ. ಮುಂದಿನ ದಿನಗಳಲ್ಲಿ ಅವರೊಂದಿಗೆ ಮಾತುಕತೆ ನಡೆಸಿ ಲೋಪಗಳನ್ನು ಸರಿಪಡಿಸಲಾಗುವುದು. ಅಲ್ಪಸಂಖ್ಯಾತರೆಲ್ಲರೂ ಒಗ್ಗೂಡಿಯೇ ಇದ್ದೇವೆ. ಯಾವುದೇ ಸಮಸ್ಯೆ ಇಲ್ಲ ಎಂದರು.
ಅಲ್ಪಸಂಖ್ಯಾತರ ಘಟಕದ ನಿಯೋಜಿತ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬರ್ ಮಾತನಾಡಿ, ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.