ಕೇಂದ್ರ ಸರ್ಕಾರ 1000 ಮತ್ತು 500 ರೂಪಾಯಿ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಇಂದಿಗೆ (ನವೆಂಬರ್ 8ಕ್ಕೆ) ಐದು ವರ್ಷ ತುಂಬಿದೆ. ಇದು ಕಪ್ಪು ಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ಪ್ರಧಾನಿ ಹೇಳಿದರು. ನಕಲಿ ನೋಟುಗಳ ಹಾವಳಿ ವ್ಯಾಪಕವಾಗಿದೆಯೆಂಬ ನೆಪವೊಡ್ಡಿ ನೋಟು ರದ್ದತಿ ಮಾಡಿದರೂ ಶೇ.99.9ರಷ್ಟು ನೋಟುಗಳು ವಾಪಸ್ ಬಂದಿದ್ದವು.
ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರಂದು ರಾತ್ರಿ 8ಗಂಟೆಗೆ ದಿಢೀರ್ ನೋಟು ರದ್ದುಗೊಳಿಸುವುದಾಗಿ ಘೋಷನೆ ಮಾಡಿದರು. ಆ ತಕ್ಷಣದಿಂದಲೇ 1000 ಮತ್ತು 500 ರೂಪಾಯಿ ನೋಟುಗಳ ಚಲಾವಣೆ ಸ್ಥಗಿತಗೊಂಡಿತ್ತು. ಇದರಿಂದ ಜನಸಾಮಾನ್ಯರು ಪರದಾಡಿದರು.
ನಂತರ ಕೋಟ್ಯಂತರ ಮಂದಿ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತರು. ಕೂಲಿ ಕೆಲಸವನ್ನು ಬಿಟ್ಟು ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಬ್ಯಾಂಕುಗಳ ಬಳಿ ನಿಂತು ಕೇವಲ 2 ಸಾವಿರ ರೂಪಾಯಿ ಮಾತ್ರ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಯಿತು.
ದೇಶದ ಎಲ್ಲಾ ಬ್ಯಾಂಕುಗಳ ಮುಂದೆಯೂ ಸರತಿ ಸಾಲಿನಲ್ಲಿ ವೃದ್ಧರು ಮಹಿಳೆಯರು ಬಿಸಿಲನ್ನು ಲೆಕ್ಕಿಸದೆ ಸಾಲಿನಲ್ಲಿ ನಿಂತರು. ನೋಟು ಅಮಾನ್ಯೀಕರಣದ ಆಘಾತದಿಂದ ಹಲವರು ಮೃತಪಟ್ಟರು. ಸರದಿ ಸಾಲಿನಲ್ಲಿ ನಿಂತಿದ್ದವರಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಪ್ರತಿಪಕ್ಷಗಳು ವ್ಯಾಪಕ ಪ್ರತಿರೋಧ ವ್ಯಕ್ತಪಡಿಸಿದವು. ನೋಟು ಅಮಾನ್ಯೀಕರಣ ದೊಡ್ಡ ಹಗರಣ ಎಂದು ಪ್ರತಿಭಟನೆ ವ್ಯಕ್ತಪಡಿಸಲಾಯಿತು.

ಎಟಿಎಂಗಳಿಂದ ಕೇವಲ 4000 ರೂಪಾಯಿ ಪಡೆಯಲು ಮಿತಿ ಹೇರಲಾಯಿತು. ಇದರಿಂದ ಕೆರಳಿದ ಗ್ರಾಹಕರು ಬ್ಯಾಂಕ್ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿ ಹಲ್ಲೆಗಳನ್ನು ನಡೆಸಿದರು. ಪ್ರತಿಭಟನೆಗಳು ನಡೆದವು. ಆದ್ದರಿಂದ ಬ್ಯಾಂಕ್ ಸಿಬ್ಬಂದಿ ರಕ್ಷಣೆ ನೀಡುವಂತೆ ಕೆಲಸ ಬಹಿಷ್ಕರಿಸಿ ಪ್ರತಿಭಟನೆಯನ್ನೂ ನಡೆಸಿದರು. ಬ್ಯಾಂಕ್ ಸಿಬ್ಬಂದಿಯೂ ಮೃತಪಟ್ಟರು.
1000 ಮತ್ತು 500 ರೂಪಾಯಿ ನೋಟುಗಳನ್ನು ಅಮಾನ್ಯೀಕರಣಗೊಳಿಸಿದರೂ ಕೇಂದ್ರ ಸರ್ಕಾರ ಮತ್ತೆ 2000 ರೂಪಾಯಿ ನೋಟನ್ನು ಚಲಾವಣೆಗೆ ತಂದಿತು. 500 ರೂಪಾಯಿ ಹೊಸ ಬಣ್ಣದ ನೋಟನ್ನು ಚಲಾವಣೆಗೆ ಬಿಟ್ಟಿತು. ಅಂದರೆ ನೋಟು ಅಮಾನ್ಯೀಕರಣದ ಉದ್ದೇಶ ಈಡೇರಿರಲಿಲ್ಲ ಎಂಬ ಸಂಗತಿ ಜಗಜ್ಜಾಹೀರಾಗಿ ಹೋಯಿತು.
ಇದೆಲ್ಲವೂ ಈಗ ಇತಿಹಾಸದ ಪುಟಗಳನ್ನು ಸೇರಿದ್ದು, ನೋಟು ಅಮಾನ್ಯೀಕರಣಗೊಳಿಸಿ ಐದು ವರ್ಷ ತುಂಬಿದೆ. ಹಳೆಯ ನೋಟುಗಳನ್ನು ವಾಪಸ್ ಪಡೆದಿದ್ದು ಹಳೆಯ ನೋಟುಗಳಿಗೆ ಬದಲಾಗಿ ಶೇಕಡ 86ರಷ್ಟು ಹೊಸ ನೋಟುಗಳನ್ನು ಬದಲಾಯಿಸಲು ಇದುವರೆಗೂ ಸಾಧ್ಯವಾಗಿಲ್ಲ.
ಕಪ್ಪುಹಣ ತಡೆ, ಭಯೋತ್ಪಾದಕರಿಗೆ ನೆರವು ನೀಡುವುದನ್ನು ನಿಯಂತ್ರಿಸುವುದು ಮತ್ತು ನಕಲಿ ನೋಟುಗಳ ಹಾವಳಿ ತಡೆಯುವುದು ನೋಟು ಅಮಾನ್ಯೀಕರಣದ ಉದ್ದೇಶವೆಂದು ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಬಿಜೆಪಿ ಮುಖಂಡರು ಹೇಳಿದರು. ಆದರೆ ಕಪ್ಪುಹಣಕ್ಕೆ ತಡೆ ಬೀಳಲಿಲ್ಲ. ನಕಲಿ ನೋಟುಗಳ ಚಲಾವಣೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.