ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ದೀರ್ಘಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಜೈಪುರದಲ್ಲಿ ವಿಶ್ವ ಜಾಟ್ ಸಮಾವೇಶದಲ್ಲಿ ಮಾತನಾಡಿ, ದೇಶ ಹಿಂದೆಂದೂ ಕಂಡಿರದಂತಹ ಪ್ರತಿಭಟನೆ ನಡೆಯುತ್ತಿದೆ. 600 ಮಂದಿ ರೈತರು ಹುತಾತ್ಮರಾಗಿದ್ದಾರೆ. ಪ್ರಾಣಿಗಳು ಸತ್ತರೆ ಸಂತಾಪ ವ್ಯಕ್ತಪಡಿಸುವ ದೆಹಲಿ ನಾಯಕರು ರೈತರ ಸಾವಿನ ಬಗ್ಗೆ ಒಂದು ಸಂತಾಪ ವ್ಯಕ್ತಪಡಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ತತಿಭಟನೆಯಲ್ಲಿ ತೊಡಗಿದ್ದ 600 ಮಂದಿ ರೈತರು ಸಾವನ್ನಪ್ಪಿದರೂ ಸಂಸತ್ತಿನಲ್ಲಿ ಒಂದು ಪ್ರಸ್ತಾವವನ್ನು ಪ್ರಸ್ತಾಪಿಸಲಿಲ್ಲ. ಮಹಾರಾಷ್ಟ್ರದಲ್ಲಿ ಬೆಂಕಿ ದುರಂತದಲ್ಲಿ 10 ಮಂದಿ ರೋಗಿಗಳು ಮೃತಪಟ್ಟರು ದೆಹಲಿಯಿಂದ ಒಂದು ಪ್ರಸ್ತಾವವಿಲ್ಲ. ರೈತರ ಸಾವಿನ ಬಗ್ಗೆ ಒಬ್ಬ ನಾಯಕರೂ ಮಾತನಾಡಿಲ್ಲ. ಸಂಸತ್ತಿನಲ್ಲಿ ಎದ್ದುನಿಂತು ಮೌನಾಚರಣೆ ಮೂಲಕ ಗೌರವವನ್ನೂ ಸಲ್ಲಿಸಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಟೀಕಾಪ್ರಹಾರ ನಡೆಸಿದರು.
“ರೈತರ ಪ್ರತಿಭಟನೆ ವಿಷಯವಾಗಿ ನನಗೆ ನೋವಾಯಿತು. ಸಿಟ್ಟು ಬಂತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದೆ. ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೀರಿ. ಸಿಖ್ಖರು ಸೋಲಿಸುವುದಿಲ್ಲ. ಜಾಟರು ಸೋಲಿಸುತ್ತಾರೆ. ರೈತರು ಇದನ್ನೇ ಮಾಡುತ್ತಾರೆ. ಒಮ್ಮೆ ಯೋಚಿಸಿ ಎಂದು ಹೇಳಿದೆ ಎಂದು ವಿವರಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅಕಾಲ್ ತಕ್ತ್ ನಲ್ಲಿ ಆಪರೇಷನ್ ಬ್ಲೂಸ್ಟಾರ್ ನಡೆಸಿದ್ದರಿಂದ ಬೆಲೆ ತೆರಬೇಕಾಯಿತು. ಸಿಖ್ ಸಮುದಾಯ ನೊಂದಿತ್ತು. ಮಹಾರಾಷ್ಟ್ರದ ಪುಣೆಯಲ್ಲಿ ಎ.ಎಸ್.ವೈದ್ಯ ಹತ್ಯೆಯಾಗಿದ್ದರು. ಇದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಗಿಲ್ ಯುದ್ದದಲ್ಲಿ ರೈತರ ಮಕ್ಕಳು ಪರ್ವತಶ್ರೇಣಿಗಳನ್ನು ಏರಬೇಕಾಯಿತು. ಇದು ಸರ್ಕಾರದ ವೈಫಲ್ಯ. ಅನ್ಯಾಯದ ವಿರುದ್ಧ ಕೆಲವು ಜನರು ಪ್ರತಿಕ್ರಿಯಿಸಿದ್ದಾರೆ. ರೈತರೂ ಒಂದು ದಿನ ಪ್ರತಿಕ್ರಿಯಿಸುತ್ತಾರೆ. ಕೆಂಪುಕೋಟೆ ಘಟನೆಗೂ ರೈತರ ಪ್ರತಿಭಟನೆಗೂ ಸಂಬಂಧವಿಲ್ಲ ಎಂದು ಹೇಳಿದರು.
ಪ್ರಧಾನಿಗೆ ಹೇಳುತ್ತೇನೆ. “ನೀವು ರಾಜ. ಹಿರಿಯರೂ ಇದ್ದೀರಿ. ರೈತರಿಗೆ ಹೇಳಿ ನೀವು ಮಾಡುತ್ತಿರುವುದು ತಪ್ಪ ಇಲ್ಲವೇ ಸರಿ ಎಂದು. ನೀವು ಯಾವುದನ್ನೂ ಹೇಳುತ್ತಿಲ್ಲ. ರೈತರ ನೋವು ನಿಮಗೆ ಅರ್ಥವಾಗುತ್ತಿಲ್ಲ. ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳುವ ಮನಸ್ಸು ಮಾಡುತ್ತಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ರೈತರು ಹೇಳುತ್ತಿದ್ದಾರೆ” ಎಂದು ಟೀಕಿಸಿದರು.


