ತ್ರಿಬಲ್ ಇಂಜಿನ್ ಸರ್ಕಾರ ಇರುವವರೆಗೂ ಲಖಿಂಪುರ್ ಖೇರಿ ರೈತರ ಹತ್ಯಾ ಪ್ರಕರಣದಲ್ಲಿ ರೈತರಿಗೆ ನ್ಯಾಯ ಸಿಗುವುದಿಲ್ಲ ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಜನಾದೇಶ ಮಹಾರ್ಯಾಲಿಯನ್ನು ಉದ್ದೇಶಿ ಮಾತನಾಡಿದ ಅಖಿಲೇಶ್, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಸಚಿವ ಅಜಯ್ ಮಿಶ್ರಾ ಈ ಮೂರು ಕೇಂದ್ರಗಳು ಅಧಿಕಾರ ಚಲಾಯಿಸುತ್ತಿದ್ದು, ರೈತರಿಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಬಹುಜನ ಸಮಾಜ ಪಕ್ಷದ ಹಿರಿಯ ನಾಯಕರಾದ ಲಾಲ್ಜಿ ವರ್ಮಾ, ರಾಮಚಲ್ ರಾಜಭರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಅವರು ಮಾತನಾಡಿದರು. ವರ್ಮಾ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ರಾಮಚಲ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಎಸ್.ಪಿಯಿಂದ ಉಚ್ಚಾಠಿಸಲಾಗಿತ್ತು.
2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವರ್ಮಾ ಕತೇಹಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ರಾಜ್ ಭರ್ ಅಕ್ಬರ್ ಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಲಖಿಂಪುರ್ ಖೇರಿ ಪ್ರಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವೇ ಕಾರಣ. ಇದಕ್ಕೆ ಸಚಿವ ಅಜಯ್ ಮಿಶ್ರ ಸಹಾಯ ಮಾಡಿದ್ದಾರೆ ಎಂದು ಅಖಿಲೇಶ್ ದೂರಿದರು.
ರೈತರು ದೇಶದ ಬೆನ್ನೆಲುಬು. ನಮ್ಮ ಆರ್ಥಿಕತೆಗೆ ರೈತರ ಕೊಡುಗೆ ಸಾಕಷ್ಟಿದೆ. ನಮ್ಮ ಅನ್ನದಾತರಿಗೆ ಬಿಜೆಪಿ ಮೋಸ ಮಾಡಿದೆ. ಅನ್ಯಾಯ ಮಾಡಿದೆ ಎಂದು ಟೀಕಿಸಿದರು.
ಬೆಲೆ ಏರಿಕೆಯಿಂದ ಉಜ್ವಲ ಯೋಜನೆ ಬುಜ್ವಲ ಯೋಜನೆಯಾಗಿದೆ. ನಮ್ಮ ಮುಖ್ಯಮಂತ್ರಿ ಕೆಲವೊಮ್ಮೆ ಕೆಂಪು ಬಣ್ಣಕ್ಕೆ ಹೆದರುತ್ತಾರೆ. ಹಾಗಾಗಿ ಬೆಲೆ ಇಳಿಕೆ ಮಾಡಿ ಉಜ್ವಲ ಸಿಲಿಂಡರ್ ಗಳ ಬಣ್ಣ ಬದಲಿಸಲಿ ಇಲ್ಲವೇ ಹೆಸರು ಬದಲಿಸಲಿ ಎಂದು ಗೇಲಿ ಮಾಡಿದರು.