ಮುಂದಿನ ವರ್ಷದಿಂದ 60 ವರ್ಷದವರಿಗೆ ಮಾತ್ರ ಪ್ರಶಸ್ತಿ ನೀಡಬೇಕೆಂಬ ಮಾನದಂಡ ತೆಗೆದುಹಾಕುವ ಜೊತೆಗೆ ಪ್ರಶಸ್ತಿ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುವುದು. ಜೊತೆಗೆ ಮೆಡಲ್ ಸಹ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಈಗ 60 ವರ್ಷದವರಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿದೆ. ಇದರಿಂದ ಸಾಕಷ್ಟು ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಮನಗಂಡಿರುವ ಸರ್ಕಾರ ಮುಂದಿನ ವರ್ಷದಿಂದ ಉತ್ತಮ ಸಾಧನೆ ಮಾಡಿರುವ ಯುವಕ/ಯುವತಿಯರಿಗೂ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮುಂದಿನ ವರ್ಷ ನಾವು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಯನ್ನು ಕರೆಯುವುದಿಲ್ಲ. ಅರ್ಜಿಗಳನ್ನು ನೀಡಬೇಕಾದ ಅಗತ್ಯವೂ ಇಲ್ಲ. ನೀವ್ಯಾರೂ ದೊಡ್ಡದೊಡ್ಡ ಪೇಪರ್ ಕಟಿಂಗ್ ಗಳನ್ನು ಬುಕ್ ನಲ್ಲಿ ಜೋಡಿಸುವುದು ಬೇಡ. ರಾಜ್ಯೋತ್ಸವ ಪ್ರಶಸ್ತಿ ನೀಡಲು ಎರಡು ತಿಂಗಳ ಮೊದಲೇ ಆಯ್ಕೆ ಸಮಿತಿ ಮಾಡಲಿದೆ. ಅರ್ಜಿ ಸಲ್ಲಿಸದೆಯೂ ಪ್ರಶಸ್ತಿ ಬಂತು ಎಂಬ ನೆಮ್ಮದಿ ಇರುತ್ತದೆ ಎಂದರು.
ದಲಿತರು, ರೈತರು, ಕೂಲಿಕಾರ್ಮಿಕರು ಆರ್ಥಿಕ ಚಟುವಟಿಗಳಲ್ಲಿ ಭಾಗಿಯಾದರೆ ರಾಜ್ಯದ ಸಂಪತ್ತು ಹೆಚ್ಚಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿ, ರಾಜ್ಯ ತಲಾವಾರು ಆದಾಯದಲ್ಲಿ 5ನೇ ಸ್ಥಾನದಲ್ಲಿದೆ. ಇದಕ್ಕೆ ಕೇವಲ 35ರಷ್ಟು ಜನರು ಕೈಜೋಡಿಸಿದ್ದಾರೆ. ಹಾಗಾಗಿ ದಲಿತರು, ರೈತರು, ಕೂಲಿಕಾರ್ಮಿಕರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದರೆ ತಲಾವಾರು ಆದಾಯದಲ್ಲಿ ಹೆಚ್ಚಳವಾಗುವುದಲ್ಲದೆ ಸಂಪತ್ತು ಕೂಡ ಹೆಚ್ಚಾಗಲಿದೆ ಎಂದು ತಿಳಿಸಿದರು.
ಮಾನವ ದಿನಗಳು ದುಡಿಯುವ ದಿನಗಳಾಗಿ ಪರಿವರ್ತನೆಯಾಗಬೇಕು. ದುಡಿಯುವ ಕೈಗಳು ಆರ್ಥಿಕ ಚಟುವಟಿಕೆಯಲ್ಲಿ ತೊಡಗಲು ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಹೊಸ ಮಾರುಕಟ್ಟೆ ಒದಗಿಸಲು ತೀರ್ಮಾನಿಸಿದ್ದೇವೆ ಎಂದರು.
ಕರ್ನಾಟಕದ ಮೂಲಕ ನವಭಾರತ ನಿರ್ಮಾಣಕ್ಕೆ ಮುನ್ನಡಿ ಬರೆಯಬೇಕು. ಇದಕ್ಕಾಗಿ ನಾವು ಅಹರ್ನಿಶಿ ಕೆಲಸ ಮಾಡಬೇಕು ಎಂಬುದು ನಮಗೆ ಗೊತ್ತಿದೆ. ಆಧ್ದರಿಂದ ನವಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.