ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು ಒಂದು ಕ್ಷೇತ್ರ ಕಾಂಗ್ರೆಸ್ ಮತ್ತೊಂದು ಕ್ಷೇತ್ರ ಬಿಜೆಪಿಯ ಪಾಲಾಗುವ ಸೂಚನೆಗಳು ಕಂಡುಬಂದಿವೆ.
ಸದ್ಯಕ್ಕೆ (10.10ಗಂಟಗೆ ಫಲಿತಾಂಶ) ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ 4ನೇ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಾನೆ 18019 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ 17,769 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ 4ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಲ್ಪಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಮುಖ್ಯಮಂತ್ರಿ ತವರು ಕ್ಷೇತ್ರದಲ್ಲಿ ಬಿಜೆಪಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ. ಇನ್ನು 17 ಸುತ್ತುಗಳ ಮತ ಎಣಿಕೆ ಬಾಕಿ ಇದ್ದು ಫಲಿತಾಂಶ ಏರುಪೇರಾಗುವ ಸಾಧ್ಯತೆ ಇದೆ.
ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಮುನ್ನಡೆ ಕಾಯ್ದಕೊಂಡಿದ್ದಾರೆ. ರಮೇಶ್ 27791 ಮತ ಪಡೆದು 11 ಸಾವಿರ ಮತಗಳ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 16160 ಮತಗಳನ್ನು ಪಡೆದು ಹಿನ್ನಡೆ ಅನುಭವಿಸುತ್ತಿದ್ದಾರೆ.
ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಲಕ್ಷಣಗಳು ಕಂಡು ಬಂದಿದೆ. 7ನೇ ಸುತ್ತಿನಲ್ಲೂ ಬಿಜೆಪಿ 32,587 ಮತ ಗಳಿಸಿದ್ದು 11631 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇನ್ನೂ ಹಲವು ಸುತ್ತುಗಳ ಮತ ಎಣಿಕೆ ಕಾರ್ಯ ಬಾಕಿ ಇದೆ.
ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ಎರಡು ಕ್ಷೇತ್ರಗಳಲ್ಲೂ ಪಡೆದ ಮತಗಳು ಕೇವಲ 1200 ಮಾತ್ರ.


