ಧೂಮ್-2, ರಯೀಸ್ ಮತ್ತು ರೋಡ್ ಟು ಸಂಗಮ್ ನಂತಹ ಹಿಂದಿ ಚಲನಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದ್ದ ಹಿರಿಯ ನಟ ಯೂಸುಫ್ ಹುಸೇನ್ ಕೊವಿಡ್-19ನಿಂದ ಶನಿವಾರ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ನಟ ಹುಸೇನ್ ಅವರ ಅಳಿಯ ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಮಾಧ್ಯಮಗಳೊಂದಿಗೆ ಮಾತನಾಡಿ, ನಟ ಹುಸೇನ್ ಲೀಲಾವತಿ ಆಸ್ಪತ್ರೆಯಲ್ಲಿ ನಿಧನಾದರು ಎಂದು ತಿಳಿಸಿದ್ದಾರೆ.
‘ಶಾಹಿದ್’ ಚಿತ್ರನಿರ್ಮಾಣಕ್ಕೆ ತೊಡಗಿದಾಗ ಹುಸೇನ್ ಅವರು ಹೇಗೆ ಆರ್ಥಿಕವಾಗಿ ಸಹಾಯ ಮಾಡಿದರು ಎಂಬುದನ್ನು ಮೆಹ್ತಾ ಟ್ವೀಟ್ ಮಾಡಿ ಸ್ಮರಿಸಿಕೊಂಡಿದ್ದಾರೆ.
“ಚಲನಚಿತ್ರ ನಿರ್ಮಾಪಕನಾಗಿ ವೃತ್ತಿಜೀವನ ಆರಂಭಿಸಿದಾಗ ನಾನು ತೊಂದರೆಗೆ ಸಿಲುಕಿದ್ದೆ. ನನ್ನ ಜೀವನ ಮುಗಿಯಿತು ಎಂದು ತಿಳಿದುಕೊಂಡಿದ್ದೆ. ಆಗ ನನ್ನ ಬಳಿ ಬಂದ ನಟ ಹುಸೇನ್ ಅವರು ನನ್ನ ಬಳಿ ಹಣ ಇದೆ. ನೀವು ತುಂಬಾ ತೊಂದರೆಗೀಡಾಗಿದ್ದರೆ ಅದನ್ನು ನೀವು ಬಳಸಿಕೊಳ್ಳಬಹುದು. ಅದು ನನ್ನ ಬಳಿ ಇದ್ದರೆ ಪ್ರಯೋಜನವಿಲ್ಲ ಎಂದು ಚೆಕ್ ಬರೆದುಕೊಟ್ಟರು. ಶಾಹಿದ್ ಚಿತ್ರ ಪೂರ್ಣಗೊಂಡಿತು. ಅದು ಯೂಸುಫ್ ಹುಸೇನ್ ಅವರಿಂದಾಗಿ” ಎಂದು ಹೇಳಿಕೊಂಡಿದ್ದಾರೆ.
“ಅವರು ನನ್ನ ಮಾವ ಮಾತ್ರವಲ್ಲ ತಂದೆಯೂ ಕೂಡ ಆಗಿದ್ದರು. ಅವರು ಇದ್ದಾಗ ಒಳ್ಳೆಯ ಕೆಲಸ ಮಾಡಿದರು. ಇಂದು ಅವರು ಇಲ್ಲವಾಗಿದ್ದಾರೆ’ ಎಂದು ಬರೆದಿದ್ದಾರೆ.
“ಜೀವನವು ಎಂದಿಗೂ ಒಂದೇ ಆಗಿರುವುದಿಲ್ಲ. ನಾನು ನಿಮ್ಮನ್ನು ಕಳೆದುಕೊಳ್ಳುತ್ತೇನೆ ಎಂದು ನಂಬಿರಲಿಲ್ಲ. ಆದರೆ ನೀವು ಈಗ ಇಲ್ಲ. ಇದರಿಂದ ನನಗೆ ಸಾಕಷ್ಟು ನೋವಾಗಿದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.
ದಬಾಂಗ್-3, ಓ ಮೈ ಗಾಡ್, ಐ ಆಮ್ ಸಿಂಗ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅಭಿಷೇಕ್ ಬಚ್ಚನ್ ನಟನೆಯ ಬಾಬ್ ಬಿಸ್ವಾಸ್ ಚಿತ್ರದಲ್ಲೂ ನಟಿಸಿದ್ದು, ಆ ಚಿತ್ರ ಇನ್ನು ಬಿಡುಗಡೆಯಾಗಿಲ್ಲ.
“ನಾವು ಕುಚ್ ನಾಕಹೋ ಮತ್ತು ಬಾಬ್ ಬಿಸ್ವಾಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ಸೌಮ್ಯ ವ್ಯಕ್ತಿಯಾಗಿದ್ದರು. ಕರುಣೆಯುಳ್ಳವರು ಮತ್ತು ಪ್ರೀತಿಯಿಂದ ನಮ್ಮನ್ನು ಆದರಿಸುತ್ತಿದ್ದರು” ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿ ಹುಸೇನ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.