2024ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು ಕಾಂಗ್ರೆಸ್ ಪ್ರಮುಖ ಪಕ್ಷವಾಗಿ ಸಮ್ಮಿಶ್ರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಅದು ಅಧಿಕಾರದಲ್ಲಿರುವ ಏಕಪಕ್ಷೀಯ ಸರ್ಕಾರದ ಆಡಳಿತವನ್ನು ಕೊನೆಗೊಳಿಸುತ್ತದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಪುಣೆ ಪ್ರೆಸ್ ಕ್ಲಬ್ ಆಯೋಜಿಸಿದ್ದ ಜೆಎಸ್ ಕರಂಡಿಕರ್ ಸಂಸ್ಮರಣಾ ಉಪನ್ಯಾಸದ ಬಳಿಕ ಮಾತನಾಡಿದ ರಾವತ್, “ಕಾಂಗ್ರೆಸ್ ಇಲ್ಲದೆ ಯಾವುದೇ ಸರ್ಕಾರ ರಚಿಸಲು ಆಗುವುದಿಲ್ಲ. ಇದು ದೇಶದಲ್ಲಿ ಪ್ರಮುಖ ಮತ್ತು ಆಳವಾಗಿ ಬೇರೂರಿರುವ ಪಕ್ಷವಾಗಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದ್ದಾರೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಬಿಜೆಪಿ ಹಲವು ದಶಕಗಳ ಕಾಲ ಅಧಿಕಾರದಲ್ಲಿ ಉಳಿಯುತ್ತದೆ ಎಂಬ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ರಾವತ್, ಬಿಜೆಪಿ ಭಾರತೀಯ ರಾಜಕೀಯದಲ್ಲಿ ಉಳಿಯುತ್ತದೆ. ಆದರೆ ವಿರೋಧ ಪಕ್ಷವಾಗಿ ಮಾತ್ರ ಉಳಿಯುತ್ತದೆ ಎಂದು ಹೇಳಿದರು.
ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ ಎಂದು ಹೇಳಿಕೊಳ್ಳುತ್ತದೆ. ವಿಶ್ವದ ಅತಿದೊಡ್ಡ ಪಕ್ಷ ಚುನಾವಣೆಯಲ್ಲಿ ಸೋತರೆ ಅವರು ವಿರೋಧ ಪಕ್ಷವಾಗುತ್ತಾರೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ 105 ಶಾಸಕರನ್ನು ಹೊಂದಿರುವ ಪ್ರಮುಖ ವಿರೋಧ ಪಕ್ಷವಾಗಿದೆ’ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಕಳೆದ ಎರಡು ವರ್ಷಗಳಿಂದ ಆಡಳಿತ ಪಕ್ಷವು ಕೊರೊನ ವೈರಸ್ ಕಾರಣದ ನೆಪವೊಡ್ಡಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಪ್ರವೇಶಿಸಲು ಮಾಧ್ಯಮದವರಿಗೆ ಅನುಮತಿ ನೀಡುತ್ತಿಲ್ಲ. ಆದರೆ ನಿಷೇಧದ ಹಿಂದಿನ ನಿಜವಾದ ಕಾರಣವೇನೆಂದರೆ ಪತ್ರಕರ್ತರಿಗೆ ಮಾತನಾಡಲು ಅವಕಾಶ ನೀಡಿದರೆ ಹಲವು ವಿಷಯಗಳು ಹೊರಬರಹುದು ಎಂಬ ಭಯ. ಹೀಗಾಗಿ ಪತ್ರಕರ್ತರಿಂದ ಅಂತರ ಕಾಯ್ದುಕೊಳ್ಳುವಂತೆ ಸಚಿವರಿಗೆ ಕೇಂದ್ರ ಸರ್ಕಾರ ಹೇಳುತ್ತಿದೆ. ಪತ್ರಕರ್ತರೂ ಕೂಡ ಸ್ಕ್ಯಾನರ್ ಗೆ ಒಳಗಾಗಬೇಕಾಗಿದೆ. ಈಗಿನಂತೆ ತುರ್ತುಪರಿಸ್ಥಿತಿಯ ಸಮಯದಲ್ಲೂ ಮಾಧ್ಯಮಗಳಿಗೆ ತಡೆ ಇರಲಿಲ್ಲ’ ಎಂದು ಹೇಳಿದರು.
‘ಕೇಂದ್ರ ಸರ್ಕಾರ ಅನುಕೂಲಕರ ವರದಿಯನ್ನು ಮಾತ್ರ ಬಯಸುತ್ತದೆ ಎಂದು ರಾವುತ್ ಆರೋಪಿಸಿದರು. ಗಂಗಾ ನದಿಯಲ್ಲಿ ಶವಗಳು ತೇಲುತ್ತಿರುವ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ ನಂತರ ಆದಾಯ ತೆರಿಗೆ ಇಲಾಖೆಯು ಆ ಪತ್ರಿಕೆಯ ಕಚೇರಿಗಳ ಮೇಲೆ ದಾಳಿ ನಡೆಸಿತು’ ಎಂದು ತಿಳಿಸಿದರು.