ಅಮೆರಿಕಾದಿಂದ ಬೆಂಗಳೂರಿಗೆ ಆಗಮಿಸಿದ ಪುತ್ರಿ ದ್ರುತಿ ಕಂಠೀರವ ಸ್ಟೇಡಿಯಂಗೆ ಭೇಟಿ ನೀಡಿ ತಂದೆ ಪುನೀತ್ ಪಾರ್ಥೀವ ಶರೀರ ಕಂಡು ಕಣ್ಣೀರು ಹಾಕಿದರು. ಅಪ್ಪು ಪಾರ್ಥೀವ ಶರೀರಕ್ಕೆ ಹೊದಿಸಿದ್ದ ಸಂಜೀವಿನಿ ತೆಗೆದು ದ್ರುತಿಗೆ ತಂದೆಯ ಮುಖದರ್ಶನಕ್ಕೆ ಅವಕಾಶ ನೀಡಲಾಯಿತು.
ಪುನೀತ್ ಅವರ ತಲೆ ಮುಟ್ಟಿ ನಮಸ್ಕರಿಸಿದ ದ್ರುತಿ ತಂದೆಯ ಅಕಾಲಿಕ ಮರಣ ಕಂಡು ಬಿಕ್ಕಿಬಿಕ್ಕಿ ಅತ್ತರು. ತಾಯಿ ಅಶ್ವಿನಿ ಅವರನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದರು. ಈ ದೃಶ್ಯ ಎಲ್ಲರ ಮನಕಲಕುವಂತೆ ಇತ್ತು.
ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಕಂಠೀರವ ಸ್ಟೇಡಿಯಂಗೆ ಜನಸಾಗರವೇ ಹರಿದುಬರುತ್ತಿದೆ.
ಪುನೀತ್ ಪಾರ್ಥೀವ ಶರೀರ ಸಾರ್ವಜನಿಕರ ದರ್ಶನಕ್ಕೆ ಇಟ್ಟಿರುವ ಕಂಠೀರವ ಕ್ರೀಡಾಂಗಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಅಕ್ಟೋಬರ್ 31ರಂದು ಅಂತ್ಯಕ್ರಿಯೆ-ಸಿಎಂ
ನಟ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆಯನ್ನು ಅಕ್ಟೋಬರ್ 31ರ ಭಾನುವಾರದಂದು ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಲಿಸಿದ್ದು ಎಲ್ಲರೂ ಸಂಯಮದಿಂದ ವರ್ತಿಸಿ, ಶಾಂತಿ ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪುನೀತ್ ಸಾವು ನೋವು ತಂದಿದೆ – ನಟ ಬಾಲಕೃಷ್ಣ
ಡಾ.ರಾಜ್ ಕುಮಾರ್ ಮತ್ತು ಎನ್.ಟಿ.ಆರ್ ಸಿನಿಮಾ ರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಒಳ್ಳೆಯ ವ್ಯಕ್ತಿಯಾಗಿದ್ದ ಪುನೀತ್ ಉತ್ತಮ ನಟರಾಗಿದ್ದರು. ವೃದ್ಧಾಶ್ರಮಗಳು, ಅನಾಥಾಶ್ರಮಗಳಿಗೆ ಸಾಕಷ್ಟು ನೆರವು ನೀಡಿದ್ದರು. ಪುನೀತ್ ಸಾವು ನೋವು ತಂದಿದೆ ಎಂದು ತೆಲುಗು ಚಿತ್ರರಂಗದ ಹಿರಿಯ ನಟ ಬಾಲಕೃಷ್ಣ ತಿಳಿಸಿದ್ದಾರೆ. ಅಪ್ಪು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.