ನಿನ್ನೆ ನಿಧನರಾದ ಪುನೀತ್ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದೆ. ಲಕ್ಷಲಕ್ಷೋಪಾದಿಯಲ್ಲಿ ಅಭಿಮಾನಿ ಗಳು ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಬಂದು ತಮ್ಮ ನೆಚ್ಚಿನ, ಪ್ರೀತಿಯ ನಟ ಪುನೀತ್ ಅವರಿಗೆ ಅಂತಿಮ ಗೌರವ ಸಲ್ಲಿಸಿ ಕಣ್ಣೀರು ಹಾಕಿಕೊಂಡು ಹೋಗುತ್ತಿರುವ ದೃಶ್ಯ ಮನಕಲಕುವಂತೆ ಇತ್ತು
ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಟರು ಕೂಡ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಪುನೀತ್ ಅಂತಿಮ ಗೌರವ ಸಲ್ಲಿಸಿ ಅವರ ಸಾಧನೆಗಳನ್ನು ಸ್ಮರಿಸಿದರು. ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಆಗಮಿಸಿದ್ದರು.
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ, ನಟರಾದ ವೆಂಕಟೇಶ್, ಶ್ರೀಕಾಂತ್, ನಿರ್ದೇಶಕ ರಾಮ್ ಗೋಪಾಲ್ ವರ್ಮ, ಹಾಸ್ಯ ನಟ ಅಲಿ, ಕೋರಿಯಗ್ರಾಫರ್ ಜಾನಿ ಹೀಗೆ ಹಲವರು ಪುನೀತಿ ಅಂತಿಮ ದರ್ಶನ ಪಡೆದರು.
ಪುನೀತ್ ಸಾವನ್ನು ನೆನಪಿಸಿಕೊಂಡು ಮೆಗಾಸ್ಟಾರ್ ಚಿರಂಜೀವ್ ಕಣ್ಣೀರು ಹಾಕಿದರು. “ನಮ್ಮ ಅಪ್ಪು ಇನ್ನಿಲ್ಲ ಎನ್ನುವ ವಿಷಯ ನೋವು ತಂದಿದೆ. ಒಳ್ಳೆಯ ನಟ. ಎಲ್ಲರನ್ನು ಆತ್ಮೀಯವಾಗಿ ಕಾಣುತ್ತಿದ್ದ ರಾಜ್ ಕುಟುಂಬ. ಹಾಗೆಯೇ ಪುನೀತ್ ಕೂಡ ಒಳ್ಳೆಯವರು ಅವರನ್ನು ಕಳೆದುಕೊಂಡಿರುವುದು ನೋವು ತಂದಿದೆ. ಅನ್ಯಾಯವಾಗಿದೆ” ಎಂದು ಹೇಳಿದರು.
ದೇವರು ಪುನೀತ್ ರಾಜ್ ಕುಮಾರ್ ಅವರನ್ನು ಬೇಗ ಕರೆದುಕೊಂಡು ಅನ್ಯಾಯ ಮಾಡಿದೆ. ಪುನೀತ್ ಅವರು ಅವರ ಪ್ರೀತಿ, ನಟನೆ ಮತ್ತು ಆತ್ಮೀಯತೆಯಿಂದ ಎಲ್ಲರನ್ನು ಸೆಳೆಯುವ ಶಕ್ತಿ ಇತ್ತು ಎಂದರು.
ತೆಲುಗು ನಟ ಶ್ರೀಕಾಂತ್ ಕನ್ನಡದಲ್ಲೇ ಮಾತನಾಡಿದರು. ಹೊಸ ಸಿನಿಮಾದಲ್ಲಿ ನಾನು ಅಪ್ಪು ಜೊತೆ ಅಭಿನಯಿಸಿದ್ದೇನೆ. ಒಳ್ಳೆಯ ನಟ. ಪುನೀತ್ ಅವರನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅಪ್ಪು ಅದ್ಭುತವಾಗಿ ನಟಿಸುತ್ತಿದ್ದರು” ಎಂದು ತಿಳಿಸಿದ್ದಾರೆ.
ಹಾಸ್ಯನಟ ಅಲಿ ಮಾತನಾಡಿ “ಪುನೀತ್ ಅದ್ಭುತ ನಟ. ಒಳ್ಳೆಯವರನ್ನು ದೇವರು ಬೇಗ ಕರೆದುಕೊಳ್ಳುತ್ತಾನೆ ಎಂಬುದಕ್ಕೆ ಪುನೀತ್ ಸಾಕ್ಷಿಯಾಗಿದ್ದಾರೆ. ಒಳ್ಳೆಯ ಮನುಷ್ಯ. ನನ್ನನ್ನು ಅಣ್ಣಾ ಎಂದೇ ಕರೆಯುತ್ತಿದ್ದರು. ದುಬೈನಲ್ಲಿ ಅವರಿಗೆ ನಾನೇ ಪ್ರಶಸ್ತಿಯನ್ನು ನೀಡಿದ್ದೆ ನಟನೆಯಲ್ಲದೆ ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದರು” ಎಂದು ಸ್ಮರಿಸಿದ್ದಾರೆ.