ಪ್ರತಿಷ್ಠಾಪನ ಕಾರ್ಯಕ್ರಮ ನಡೆಯುತ್ತಿದ್ದ ರಾಮದೇವಾಲಯಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಸವರ್ಣೀಯರ ಗುಂಪೊಂದು ಆರು ಮಂದಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗುಜರಾತ್ ನ ಕಚ್ ನಗರದಲ್ಲಿ ನಡೆದಿದೆ. ಪ್ರಕರಣದ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಬೇರೆ ಸಮುದಾಯದವರು ರಾಮ ದೇವಾಲಯದಲ್ಲಿ ಪ್ರತಿಷ್ಠಾಪನ ಕಾರ್ಯ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಆರು ಮಂದಿ ದಲಿತರು ದೇವಾಲಯ ಪ್ರವೇಶಿಸಿದ್ದರು. ಆಗ 20 ಮಂದಿ ಇದ್ದ ಗುಂಪು ದಲಿತರ ಮೇಲೆ ಮಾರಕಾಸ್ತ್ರ ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 26ರಂದು ಬೆಳಗ್ಗೆ 20 ಮಂದಿ ಗುಂಪು ದಲಿತರ ಮನೆಗಳಿಗೆ ಮತ್ತು ಹೊಲಕ್ಕೆ ನುಗ್ಗಿ ಹಲ್ಲೆ ನಡೆಸಿದರು. 11 ಗಂಟೆಗೆ ದನಗಳು ಹೊಲಕ್ಕೆ ಹೋಗಿದ್ದವು. ನಾನು ಮತ್ತು ನನ್ನ ಚಿಕ್ಕಪ್ಪ ಗಣೇಶ್ ವಾಘ್ಲೆ ಆಟೋದಲ್ಲಿ ಹಿಂದಿರುಗಿದೆವು. ಹೊಲದ ಬಳಿ ಹೋದೆವು. ದನಗಳು ಬೆಳೆಯನ್ನು ತಿಂದಿದ್ದವು ಎಂದು ತೀವ್ರಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಿಂದ ವಾಘ್ಲೆ ಹೇಳಿದ್ದಾರೆ.
“ಹೊಲದ ಬಳಿ ಇದ್ದ ಮರದ ಕೆಳಗೆ ಕೆಲವರು ಕಾಯುತ್ತಿದ್ದರು. ಕೈಯಲ್ಲಿ ಕೊಡಲಿ, ದೊಣ್ಣೆ, ರಾಡು ಸೇರಿದಂತೆ ಹರಿತವಾದ ಆಯುಧಗಳನ್ನು ಹಿಡಿದುಕೊಂಡಿದ್ದರು. ನಾವು ಅಲ್ಲಿಗೆ ಹೋಗುತ್ತಿದ್ದಂತೆಯೇ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದರು” ಎಂದು ಗೋವಿಂದ ವಾಘ್ಲೆ ಆರೋಪಿಸಿದರು.
ಇದಕ್ಕೂ ಮೊದಲು ರಾಮ ದೇವಾಲಯದಲ್ಲಿ ಪ್ರತಿಷ್ಠಾಪನ ಕಾರ್ಯ ನಡೆಯುತ್ತಿತ್ತು. ದಲಿತರು ದೇವಾಲಯ ಪ್ರವೇಶಿಸಿದರು. ಆಗ ನನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಅದರಂತೆ ನನ್ನ ಚಿಕ್ಕಪ್ಪ ಮತ್ತು ನನ್ನ ತಲೆಗೆ ತೀವ್ರ ಗಾಯಗಳಾಗಿವೆ ಎಂದು ಗೋವಿಂದ ವಾಘ್ಲೆ ಪೊಲೀಸರಿಗೆ ತಿಳಿಸಿದ್ದಾರೆ.
ಮನೆಗೆ ನುಗ್ಗಿದ 20 ಜನರ ಗುಂಪು ನನ್ನ ತಂದೆ ಜಗಬಾಯಿ ವಾಘ್ಲೆ, ಪತ್ನಿ ಬದ್ಧಿಬೆನ್ ವಾಘ್ಲೆ, ಪುತ್ರ ಭುದ ವಾಘ್ಲೆ, ಹಸ್ಮುಖ್ ವಾಘ್ಲೆ ಮೇಲೆ ಹಲ್ಲೆ ನಡೆದಿದೆ ಎಂದು ಗೋವಿಂದ ವಾಘ್ಲೆ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಇತರೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.