ದೇಶದ ಕೃಷಿ ನೀತಿಗಳ ಬಗ್ಗೆ ಮರುಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಬಿಜೆಪಿಯ ಕೇಂದ್ರ ಕಾರ್ಯಕಾರಿಣಿ ಸಮಿತಿಯಿಂದ ಕೈಬಿಟ್ಟಿರುವ ಸಂಸದ ವರುಣ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸ್ವಂತ ಬೆಳೆಯನ್ನು ಸುಡುವುದಕ್ಕಿಂತ ರೈತರಿಗೆ ನೀಡುವ ದೊಡ್ಡ ಶಿಕ್ಷೆ ಇನ್ನೊಂದಿಲ್ಲ ಎಂದು ಹೇಳಿದ್ದಾರೆ.
ವ್ಯವಸ್ಥೆ ಅವರನ್ನು ಅಂಚಿಗೆ ತಳ್ಳಲ್ಪಡುವಂತೆ ಮಾಡಿದೆ. ರೈತರನ್ನು ಅಂಚಿಗೆ ತಳ್ಳಲು ಕಾರಣವೇನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮಗೆ ಅನ್ನ ನೀಡುವವರನ್ನು ರಕ್ಷಣೆ ಮಾಡದಿದ್ದರೆ ಇಡೀ ದೇಶವೇ ವಿಫಲವಾಗುತ್ತದೆ ಎಂದು ವರುಣ್ ಹೇಳಿಕೆ ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಫಿಲಿಬಿಟ್ ಸಂಸದ ವರುಣ್ ಗಾಂಧಿ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸಮೋಧ್ ಸಿಂಗ್ ಉತ್ತರ ಪ್ರದೇಶದ ರೈತ. ಕಳೆದ 15 ದಿನಗಳ ಹಿಂದೆ ಭತ್ತವನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ಭತ್ತವನ್ನು ಮಾರಾಟ ಮಾಡಲಿಲ್ಲ. ಏಕೆಂದರೆ ಭತ್ತದ ಬೆಲೆ ಕುಸಿದುಹೋಗಿತ್ತು. ಹಾಗಾಗಿ ನೊಂದ ಸಮೋಧ್ ಸಿಂಗ್ ಭತ್ತರಾಶಿಗೆ ಸ್ವಯಂ ಪ್ರೇರಿತವಾಗಿ ಬೆಂಕಿ ಹಚ್ಚಿದರು’ ಎಂದು ಬರೆದಿದ್ದಾರೆ.
ನಮ್ಮ ವ್ಯವಸ್ಥೆ ರೈತರನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬುದು ಕಳವಳಕಾರಿ ಸಂಗತಿ. ಇಂತಹ ಸಂದರ್ಭದಲ್ಲಿ ದೇಶದ ಕೃಷಿ ನೀತಿಗಳ ಬಗ್ಗೆ ಮರುಚಿಂತನೆ ನಡೆಸಲು ಸಮಯದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಣಿಯಿಂದ ಕೈಬಿಟ್ಟ ನಂತರ ರೈತರು ಬೆಳೆದ ಕಬ್ಬಿಗೆ ಉತ್ತರ ಪ್ರದೇಶ ಸರ್ಕಾರ ನಿಗದಿಪಡಿಸಿರುವ ದರ ರೈತರಿಗೆ ಯಾವುದೇ ಪ್ರಯೋಜವಿಲ್ಲ. ಹಾಗಾಗಿ ಸರ್ಕಾರ ಮತ್ತಷ್ಟು ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಇದೇ ಸಂದರ್ಭದಲ್ಲಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಾಲಿಸ್ತಾನಿಗಳು ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವರುಣ್ ಗಾಂಧಿ ರೈತರನ್ನು ಅವಮಾನಿಸುವುದು ಒಳ್ಳೆಯದಲ್ಲ. ರೈತರ ಬಗ್ಗೆ ಬಿಜೆಪಿ ಬಳಸುತ್ತಿರುವ ಭಾಷೆ ನ್ಯಾಯಸಮ್ಮತವಾಗಿಲ್ಲ. ಇದನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದ್ದರು.
ಈಗ ಕೇಂದ್ರ ಸರ್ಕಾರ ಕೃಷಿ ನೀತಿ ಬಗ್ಗೆ ಮರುಚಿಂತನೆ ನಡೆಸಬೇಕು ಎಂದು ಸಲಹೆರೂಪದ ಒತ್ತಾಯ ಮಾಡಿದ್ದು, ಬಿಜೆಪಿ ಮುಖಂಡರ ವಿರುದ್ದ ಎಲ್ಲ ವಿಷಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವುದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿದೆ.