2018-19 ರಿಂದ 2021-22ರವರೆಗೆ ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚಾದ ಜಿಎಸ್.ಡಿಪಿಯ ಪ್ರಮಾಣ ಕೇವಲ 2,93,642 ಕೋಟಿ ರೂಪಾಯಿ ಮಾತ್ರ. ಬಿಜೆಪಿ ಆಡಳಿತದಲ್ಲಿ ಒಂದು ಕಡೆ ರಾಜ್ಯದ ಆರ್ಥಿಕತೆ ವೇಗವಾಗಿ ಕುಸಿದು ಹೋಗುತ್ತಿದೆ. ಆದರೆ ಸಾಲದ ಪ್ರಮಾಣ ರಾಕೆಟ್ಟಿನ ವೇಗದಲ್ಲಿ ಬೆಳೆಯುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಡುಡೆ ಬಿಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಸರ್ಕಾರದ ಜಿ.ಎಸ್.ಡಿ.ಪಿ ಎಷ್ಟು ಎಂದು ಹೇಳುವುದು ನಾವಲ್ಲ. ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ನಮ್ಮ ಜಿಎಸ್.ಡಿಪಿಯನ್ನು ಶ್ಲಾಘಿಸಿತ್ತು. ನಮ್ಮ 5 ವರ್ಷದ ಅವಧಿಯಲ್ಲಿ ಜಿಎಸ್.ಡಿಪಿಯ ಪ್ರಮಾಣ 8,07,003ರಷ್ಟು ಹೆಚ್ಚಾಯಿತು ಎಂದು ತಿಳಿಸಿದ್ದಾರೆ.
2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಜಿಎಸ್.ಡಿಪಿ ಕೇವಲ 6,01,582 ಕೋಟಿ ಇತ್ತು. ನಾನು ಅಧಿಕಾರದಿಂದ ಇಳಿಯುವಾಗ ಅದು ರೂ.14,08,585 ಕೋಟಿಗೆ ಏರಿಕೆಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಜಿ.ಎಸ್.ಡಿ.ಪಿ ಯಲ್ಲಿ ಶೇಕಡಾವಾರು ಸಾಲದ ಪ್ರಮಾಣ ನಮ್ಮ ಸರ್ಕಾರದ ಅವಧಿಯಲ್ಲಿ 17 ರಿಂದ 20 ರ ಒಳಗೆ ಇತ್ತು. ಇದು ದೇಶದಲ್ಲಿಯೇ ಅತ್ಯುತ್ತಮ ನಿರ್ವಹಣೆಯಾಗಿತ್ತು. ಆದರೆ ಈಗ ಅದು 26.9 ರಷ್ಟಾಗಿದೆ. ನಿಯಮಗಳ ಪ್ರಕಾರ ಇದು ಶೇ. 25ರಷ್ಟು ಮೀರುವಂತಿಲ್ಲ. ಸಾಲಕ್ಕಾಗಿ ನಿಯಮಗಳನ್ನೇ ತಿದ್ದಿದವರು ನೀವಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಗ ಪ್ರತಿ ವರ್ಷ ಸಾಲ ಮಾಡುವ ಪ್ರಮಾಣ ರೂ. 72,000 ಕೋಟಿಗೆ ತಲುಪಲಿದೆ. ಕಳೆದ ವರ್ಷ ರೂ.69 ಸಾವಿರ ಕೋಟಿ ಸಾಲ ಮಾಡಿದರೂ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿದ್ದು 5,400 ಕೋಟಿ ರೂ.ಗಳು ಮಾತ್ರ ಎಂದು ಹೇಳಿದ್ದೀರಿ. ಹಾಗಾದರೆ ಉಳಿದ ಹಣ ಎಲ್ಲಿಗೆ ಹೋಯಿತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಈಗಿನ ಸಾಲ ರೂ.4,57,899 ಕೋಟಿ. 2020-21 ರಲ್ಲಿಯೇ ಮಾಡಿರುವ ಸಾಲ ರೂ. 69,000 ಕೋಟಿ. ಕಳೆದ 4 ವರ್ಷಗಳಲ್ಲಿ ರಾಜ್ಯ ಸರ್ಕಾರ ರೂ.2,14,479 ಕೋಟಿ ಹೆಚ್ಚು ಸಾಲಮಾಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ 3 ವರ್ಷಗಳಲ್ಲಿ ಸುಮಾರು ರೂ.1,90,000 ಕೋಟಿ ಸಾಲ ಮಾಡಿದ್ದಾರೆ ಬುರುಡೆ ಬೊಮ್ಮಾಯಿ ಅವರೇ ಎಂದು ಲೇವಡಿ ಮಾಡಿದ್ದಾರೆ.
2008-2013 ರ ವರೆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಾಲದ ಪ್ರಮಾಣ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಒಟ್ಟಾರೆ ಶೇ. 94.18 ರಷ್ಟು ಏರಿಕೆಯಾಗಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ 2013-18 ರವರೆಗೆ ಏರಿಕೆಯಾಗಿದ್ದು ಶೇಕಡಾ 78 ರಷ್ಟು ಮಾತ್ರ ಎಂದು ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರವು ನಮ್ಮ ರಾಜ್ಯದಿಂದ ಪ್ರತಿ ವರ್ಷ ರೂ. 2,50,000 ಕೋಟಿಗೂ ಹೆಚ್ಚು ಹಣವನ್ನು ತೆರಿಗೆ-ಸುಂಕಗಳಿಂದ ಸಂಗ್ರಹಿಸುತ್ತದೆ. ಪ್ರತಿ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಎರಡರಿಂದಲೇ ರೂ. 30,000 ಕೋಟಿಗೂ ಹೆಚ್ಚಿನ ಹಣವನ್ನು ರಾಜ್ಯದ ಜನರಿಂದ ಸುಲಿಯುತ್ತಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಬುರುಡೆ ಎಂದು ಜರೆದಿದ್ದಾರೆ.