ಉತ್ತರಖಂಡದ ಲ್ಯಾಮ್ ಖಾಗ ಪಾಸ್ ಪರ್ವತಕ್ಕೆ ಟ್ರೆಕ್ಕಿಂಗ್ ತೆರಳಿ ನಾಪತ್ತೆಯಾಗಿದ್ದ 11 ಟ್ರೆಕ್ಕರ್ ಗಳ ಮೃತದೇಹಗಳನ್ನು ವಾಯುಸೇನೆ ಪತ್ತೆ ಮಾಡಿದೆ. 17 ಸಾವಿರ ಅಡಿ ಎತ್ತರದ ಪ್ರರ್ವತಪ್ರದೇಶದಲ್ಲಿ ಈ ಟ್ರೆಕ್ಕರ್ ಗಳ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.
ಅಕ್ಟೋಬರ್ 18ರಂದು ಎರಡು ತಂಡಗಳು ಲ್ಯಾಮ್ ಖಾಗ ಪಾಸ್ ಪರ್ವತಕ್ಕೆ ಟ್ರೆಕ್ಕಿಂಗ್ ತೆರಳಿದ್ದವು. ಭಾರೀ ಹಿಮಪಾತದಿಂದಾಗಿ 17 ಮಂದಿ ಟ್ರೆಕ್ಕರ್ ಗಳು ನಾಪತ್ತೆಯಾಗಿದ್ದರು. ಭಾರೀ ಹಿಮಪಾತ ಮತ್ತು ಪ್ರತಿಕೂಲ ವಾತಾವರಣದ ಪರಿಣಾಮ ಪ್ರವಾಸಿಗರು, ಗೈಡುಗಳು, ಪೋಸ್ಟರ್ ಗಳು ದಾರಿಗಾಣದೆ ಹಿಮದಲ್ಲಿ ಸಿಲುಕಿಕೊಂಡಿದ್ದರು.
ಅಕ್ಟೋಬರ್ 20ರಂದು ವಾಯುಸೇನೆಯ ಎರಡು ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಗಳು ಹರ್ಸಿಲ್ ಪ್ರವಾಸಿ ತಾಣಕ್ಕೆ ತೆರಳಿದ್ದವು. ಮೂರು ಮಂದಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಅಧಿಕಾರಿಗಳು ನಾಪತ್ತೆಯಾದ ಟ್ರೆಕ್ಕರ್ ಗಳ ಶೋಧ ಮತ್ತು ರಕ್ಷಣಾ ಕಾರ್ಯ ಆರಂಭಿಸಿದರು. ಅಂದರೆ 19,500 ಅಡಿಗಳ ಎತ್ತರದ ಪರ್ವತ ಶ್ರೇಣಿಯಲ್ಲಿ ಶೋಧ ನಡೆಸಿದರು.
ಆದರೆ ಲ್ಯಾಮ್ ಖಾಗ ಪಾಸ್ ಪರ್ವತದ 15,750 ಅಡಿಗಳ ಎತ್ತರ ಪ್ರದೇಶದಲ್ಲಿ 4 ಮೃತ ದೇಹಗಳು ಪತ್ತೆಯಾಗಿವೆ. ಹೆಲಿಕಾಪ್ಟರ್ ಮತ್ತೊಂದು ಸ್ಥಳಕ್ಕೆ ತೆರಳಿ ಬರಿಗೈಯ್ಯಲ್ಲಿ ವಾಪಸ್ಸಾಗಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 22ರಂದು ಮಧ್ಯಾಹ್ನದ ವೇಳೆ ಅದೇ ಪರ್ವತದ 16,500 ಅಡಿ ಎತ್ತರ ಪ್ರದೇಶದಲ್ಲಿ ಐದು ಮೃತದೇಹಗಳು ಪತ್ತೆಯಾದವು. ಅಲ್ಲಿ ಅತ್ಯಂತ ಪ್ರತಿಕೂಲ ವಾತಾವರಣ ಇತ್ತು. ತೀವ್ರ ಗಾಳಿಯೂ ಇತ್ತು. ಇದರಿಂದ ಮೃತದೇಹಗಳನ್ನು ಪತ್ತೆ ಮಾಡಲು ಹರಸಾಹಸಪಡಬೇಕಾಯಿತು.
ರಕ್ಷಣಾ ತಂಡ ಟ್ರೆಕ್ಕರ್ ಗಳ ಎಲ್ಲ ಮೃತದೇಹಗಳನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿ ಶೋಧ ಕಾರ್ಯ ಮುಂದುವರಿಸಿದೆ.


