ಲಖಿಂಪುರ್ ಖೇರಿ ರೈತರ ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮೇಲೆ ಸಚಿವ ಅಜಯ್ ಮಿಶ್ರಾ ಪ್ರಭಾವ ಬೀರುತ್ತಿದ್ದು ಅವರು ರಾಜಿನಾಮೆ ನೀಡದೆ ಮುಕ್ತ ತನಿಖೆ ಸಾಧ್ಯವಿಲ್ಲ ಎಂದು ಭಾರತ್ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಲಖಿಂಪುರ್ ಖೇರಿ ರೈತರ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಅಶಿಶ್ ಮಿಶ್ರಾ ಅವರನ್ನು ಕೆಂಪುಹಾಸು ಹಾಕಿ ಬಂಧಿಸಲಾಯಿತು. ಕೇಂದ್ರ ಸಚಿವರು ತಮ್ಮ ಪುತ್ರನ ರಕ್ಷಣೆಯಲ್ಲಿ ತೊಡಗಿದ್ದಾರೆ. ಎಸ್ಐಟಿ ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಆದ್ದರಿಂದ ಮುಕ್ತ ತನಿಖೆಗೆ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ.
ಮುಕ್ತ ತನಿಖೆ ನಡೆಯಬೇಕಾದರೆ ಸಚಿವ ಅಜಯ್ ಮಿಶ್ರಾ ರಾಜಿನಾಮೆ ನೀಡಬೇಕು. ಇಲ್ಲವೇ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಆಗ ಮಾತ್ರ ತನಿಖೆ ಚುರುಗೊಳ್ಳಲು ಸಾಧ್ಯ. ಈಗ ಎಸ್ಐಟಿ ನಡೆಸುತ್ತಿರುವ ತನಿಖೆ ನಮಗೆ ತೃಪ್ತಿ ತಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅಂಕಿತ್ ದಾಸ್ ಬಂಧನ ಮಾಡಲಾಗಿದೆ. ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿ ಮಾಡಿ ತನಿಖೆಯ ಹಾದಿಯನ್ನು ದಿಕ್ಕುತಪ್ಪುವಂತೆ ಮಾಡಲಾಗುತ್ತಿದೆ. ಅಶಿಶ್ ಮಿಶ್ರಾ ಅವರನ್ನು ಸೂಕ್ತ ತನಿಖೆಗೆ ಒಳಪಡಿಸಲು ಇದುವರೆಗೂ ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ದೂರಿದರು.


