Saturday, July 27, 2024
Google search engine
Homeಆರ್ಥಿಕ'ಮಾರುಕಟ್ಟೆ ಭಾರತ'ದಲ್ಲಿ ಮಾರಲು/ಕೊಳ್ಳಲುಬಹುದು

‘ಮಾರುಕಟ್ಟೆ ಭಾರತ’ದಲ್ಲಿ ಮಾರಲು/ಕೊಳ್ಳಲುಬಹುದು

ಈಗಿನದು ಮಾರುಕಟ್ಟೆ (Market India) ಭಾರತ. ಇಲ್ಲಿ ಎಲ್ಲವೂ ಮಾರಟಕ್ಕಿದೆ. ಯಾರು ಬೇಕಾದರೂ ಯಾವುದೇ ವಸ್ತುವನ್ನು ಮಾರಬಹುದು. ಯಾರು ಬೇಕಾದರೂ ಕೊಳ್ಳಬಹುದು. ಅಂತಹ ವಾತಾವರಣ ಮಾರುಕಟ್ಟೆ ಭಾರತದಲ್ಲಿ ಕಂಡುಬರುತ್ತಿದೆ. ಹಣ ಒಂದಿದ್ದರೆ ಯಾರನ್ನು ಬೇಕಾದರೂ, ಯಾವುದನ್ನು ಬೇಕಾದರೂ ಖರೀದಿಸಬಹುದು. ಪರವಾನಗಿ ಪಡೆದ ಅಧಿಕೃತ ವ್ಯಕ್ತಿಗಳೇ ಮಾರುಕಟ್ಟೆಯಲ್ಲಿ ಎಲ್ಲವನ್ನೂ ಹರಾಜಿಗೆ ಇಟ್ಟಿದ್ದಾರೆ. ಮಾರುತ್ತಲೂ ಇದ್ದಾರೆ. ಇಡೀ ಮಾರುಕಟ್ಟೆಯೇ ಬಿಕರಿ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಖರೀದಿಸುವವರಿಗೆ ಸಾಕಷ್ಟು ರಿಯಾಯಿತಿಯೂ ದೊರೆಯುತ್ತಿದೆ. ಇದು ಕೊರೊನ/ಕೊರೊನೊತ್ತರ ಕಾಲದ ಬಂಪರ್ ಕೊಡುಗೆ.

ಮಾರುಕಟ್ಟೆ ಭಾರತದಲ್ಲಿ ಗುಣಮಟ್ಟದ ಪರಿಕರಗಳು ಇವೆ. ಗುಣಮಟ್ಟವಿಲ್ಲದ ವಸ್ತುಗಳು ಇವೆ. ಹೊರಗಿನಿಂದ ತಂದೂ ಇಲ್ಲಿ ಮಾರಬಹುದು. ಹೊರಗಿನವರು ಎಷ್ಟು ಹಣ ಕೇಳಿದರೂ ಕೊಡುವ ಸಾಮರ್ಥ್ಯ ಮಾರುಕಟ್ಟೆ ಭಾರತಕ್ಕೆ ಇದೆ. ಮಾರುಕಟ್ಟೆ ಭಾರತ ದಲ್ಲಿ ಸ್ಥಳೀಯ ಗ್ರಾಹಕರು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಕೊಡಲೇಬೇಕೆಂಬ ವಾತಾವರಣ ಮಾರುಕಟ್ಟೆ ಭಾರತ ಸೃಷ್ಟಿ ಮಾಡಿದೆ. ಇದರಿಂದಾಗಿ ಮಾರುಕಟ್ಟೆ ಭಾರತದಲ್ಲಿ ಕೆಲವೇ ಮಂದಿ ಮಿಲಿಯಾಧಿಪತಿಗಳೆಂಬ ಹೆಗ್ಗಳಿಕೆ ವರ್ಷವರ್ಷಕ್ಕೂ ಹೆಚ್ಚುತ್ತಿದೆ. ಮಾಧ್ಯಮಗಳ ಪುಟಗಳು ಮಿಲಿಯಾಧಿಪತಿಗಳಿಂದಲೇ ತುಂಬಿಹೋಗುತ್ತಿವೆ. ಸ್ಥಳೀಯ ಗ್ರಾಹಕನ ನೋವು ಮಿಲಿಯಾಧಿಪತಿಗಳ ಹೊಗಳಿಕೆಯಲ್ಲಿ ಕಳೆದುಹೋಗುತ್ತಿದೆ. ಆದರೆ ಮಾರುಕಟ್ಟೆ ಭಾರತ ಡಂಪಿಂಗ್ ಗೂ ಹೆಸರು ಪಡೆಯುತ್ತಿದೆ.

ನೋಡಿ, ಮಾರುಕಟ್ಟೆ ಭಾರತ ಫ್ರಾನ್ಸ್ ನ ಡಸ್ಸಾಲ್ಟ್ ಏವಿಯೇಷನ್ ನಿಂದ ಖರೀದಿಸಿದ ಯುದ್ದ ವಿಮಾನಗಳ ಬೆಲೆ, ಅವುಗಳನ್ನು ಖರೀದಿಸುವಾಗ ಸ್ಥಳೀಯ ಗ್ರಾಹಕರಿಗೆ ಹೊರೆಬೀಳುತ್ತದೆಂಬ ಲವಲೇಶ ಕಾಳಜಿಯೂ ಇರಲಿಲ್ಲ. ಮಾರುಕಟ್ಟೆ ಭಾರತದ ಪ್ರವರ್ತಕರು ದೊಡ್ಡಮಟ್ಟದಲ್ಲಿ ಕೂಗಿ ಹೇಳಿದರು. ಮಾರುಕಟ್ಟೆ ಭಾರತ ಮತ್ತಷ್ಟು ವಿಸ್ತರಿಸುತ್ತಾ ಹೋಗುತ್ತದೆ. ಅಭಿವೃದ್ಧಿಯ ಚಿತ್ರಣ ವಿಶ್ವಮಾನ್ಯತೆ ಪಡೆಯುತ್ತದೆ. ಹೂಡಿಕೆದಾರರ ಸ್ವರ್ಗವಾಗುತ್ತದೆ ಎಂದು. ಆದರೆ ಮಾರುಕಟ್ಟೆ ಭಾರತದ ಪ್ರವೇಶದ್ವಾರಕ್ಕೂ ಪ್ರವೇಶವಿಲ್ಲದ ಅಲ್ಲಿಗೆ ಬರಲೂ ನರಳುತ್ತಿರುವ ಕೋಟ್ಯಂತರ ಮಂದಿ ಏನು ಮಾಡಬೇಕೆಂದು ತೋಚದೆ ಗೋಳು ತೋಡಿಕೊಳ್ಳುತ್ತಿದ್ದರೂ ಮಾರುಕಟ್ಟೆ ಭಾರತದ ಪ್ರವರ್ತಕರ ಮಾತುಗಳು ಬಣ್ಣಬಣ್ಣ ಪಡೆದುಕೊಳ್ಳುತ್ತಿವೆ. ಕೊಳ್ಳುವವರಿಗೆ ಕೆಂಪುಹಾಸಿನ ಸ್ವಾಗತ ದೊರೆಯುತ್ತಿದೆ.

ಮಾರುಕಟ್ಟೆ ಭಾರತದಲ್ಲಿ ಹೂಡಿಕೆದಾರರ ಪರವಾದ ನೀತಿಗಳು ಅನುಷ್ಠಾನಗೊಳ್ಳುತ್ತಿವೆ. ಸರ್ಕಾರದ ಸ್ವತ್ತು ಖಾಸಗಿ/ಬಂಡವಾಳ/ ಹಣವಂತರ ಪಾಲಾಗುತ್ತಿದೆ. ‘ಹೂಡಿದಂತೆ ಹೊಡೆದುಕೊ’ ಎಂಬುದು ಪ್ರವರ್ತಕರ ನೀತಿ. ಅದೇ ಕಾರಣಕ್ಕೆ ಫೋರ್ಬ್ಸ್ ಮ್ಯಾಗಜಿನ್ ಪುಟಗಳು ಮತ್ತಷ್ಟು ವಿಸ್ತರಿಸಿಕೊಳ್ಳುತ್ತವೆ. ರಾಜ-ಮಹಾರಾಜರು ತಮ್ಮ ಸಾಮ್ರಾಜ್ಯದ ಗಡಿಗಳನ್ನು ವಿಸ್ತರಿಸಿದಾಗ ಅದನ್ನು ಶಾಸನ ಗಳಲ್ಲಿ ಕೆತ್ತಿಸಿದ ರೀತಿ “ಹೊಡೆದುಕೊಂಡವರ” ಹೆಸರು ಫೋರ್ಬ್ಸ್ ನಲ್ಲಿ ಪ್ರಕಟಗೊಳ್ಳುತ್ತದೆ. ಆ ಮ್ಯಾಗಜಿನ್ ಪುಟಗಳು ಇಂಥವರಿಗೆ ಮಾತ್ರ ಮೀಸಲು. ಮಾರುಕಟ್ಟೆ ಭಾರತದಲ್ಲಿ ಖರೀದಿ ಹೆಚ್ಚಿದಂತೆ ಚೀನಾ, ಅಮೆರಿಕ, ಜಪಾನ್, ಜರ್ಮನಿ, ಅರ್ಜಂಟೈನ, ರಷ್ಯಾ, ಇಂಗ್ಲೆಂಡ್, ಯೂರೋಪ್ ದೇಶಗಳಿಂದ ಹರಿದು ಬರುವ ಸರಕುಗಳಿಗೆ ಯಾವುದೇ ಅಡೆತಡೆ ಇರುವುದಿಲ್ಲ. ಆಗ ಮಾರುಕಟ್ಟೆ ಭಾರತ ಪ್ರವೇಶಿಸದ ಕೋಟ್ಯಂತರ ಮಂದಿಯ ಪಾಡು ಕೇಳುವವರೆ ಇಲ್ಲವಾಗುತ್ತದೆ. ಈಗಲೂ ದೆಹಲಿಯ ಗಡಿಗಳಲ್ಲಿ ಕೊರೆವ ಚಳಿಯಲ್ಲಿ ರಸ್ತೆಗಳ ಮೇಲೆ ಕುಳಿತು ಮಾರುಕಟ್ಟೆ ಭಾರತದಿಂದ ನಮ್ಮನ್ನು ರಕ್ಷಣೆ ಮಾಡುವಂತೆ ಕೂಗಿ ಹೇಳುತ್ತಿರುವವರ ಮಾತುಗಳು ಮಾರುಕಟ್ಟೆ ಭಾರತದ ಪ್ರವರ್ತಕರಿಗೆ ತಲುಪುತ್ತಿಲ್ಲ.

ಮಾರುಕಟ್ಟೆ ಭಾರತದಲ್ಲಿ ನವಿಲಿನೊಂದಿಗೆ ಆಟವಾಡಬಹುದು. ಕೋತಿಗೆ ಅನ್ನ ತಿನ್ನಿಸಬಹುದು. ಗೋವಿಗೆ ಪೂಜೆ ಮಾಡಬಹುದು. ಗುಬ್ಬಚ್ಚಿಗೆ ನೀರು ಕುಡಿಸಬಹುದು. ಹೂಡಿಕೆದಾರರ ಮಕ್ಕಳ ಹುಟ್ಟುಹಬ್ಬ ಆಚರಿಸಬಹುದು. ಯಾವುದೋ ಹವಾನಿಯಂತ್ರಣ ಕೊಠಡಿ ಯಲ್ಲಿ ಕೂತು ಮುದ್ದಿನ ‘ಗಿಳಿಪಾಠ’ ಒಪ್ಪಿಸಬಹುದು. ಅಂಗೈಯಲ್ಲಿ ಸರ್ಗ ತೋರಿಸಬಹುದು. ದೇವಾಲಯಕ್ಕೆ ಹೋದ ಹುಡುಗನ ಪ್ರಾಣಪಕ್ಷಿ ಹಾರಿಹೋಗುವಂತೆ ಮಾಡಬಹುದು. ಮಾಂಸ ತೆಗೆಕೊಂಡು ಹೋಗುತ್ತಿದ್ದವನನ್ನು ಹತ್ಯೆ ಮಾಡಬಹುದು. ರೈತರ ಮೇಲೆ ಜೀಪು ಹತ್ತಿಸಲೂಬಹುದು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಹತ್ತಿಕ್ಕಬಹುದು. ವಿವಿಗೆ ನುಗ್ಗಿ ಹೊಡೆಯಬಹುದು. ಮಾರುಕಟ್ಟೆ, ಪ್ರವರ್ತಕರು, ಹೂಡಿಕೆದಾರರ ಬಗ್ಗೆ ಮಾತನಾಡಿದರೆ ದೇಶದ್ರೋಹದ ಪ್ರಕರಣ ದಾಖಲಿಸಬಹುದು. ಸುಳ್ಳು ಹೇಳು ಹೇಗಾದರೂ ಮಾಡು ತನ್ನ ಸರಕು ಮಾರು. ನೀ ಏನಾದರೂ ಆಗು ಮಾರುವವನಾಗು, ಕೊಳ್ಳುವವನಾಗು. ಕೊಲ್ಲುವವನಾಗು ಅನ್ನುವಂತಹ ವಾತಾವರಣ ಇದೆ.

ದೇಶಸುತ್ತು ಕೋಶ ಓದು ಎಂದಿದ್ದರು ಹಳೆಯ ಕಾಲದ ಜನ. ಕೋಶ ಓದಿದ್ದರೂ ಸರಿ ದೇಶ ಸುತ್ತುವುದು ಮಾತ್ರ ಮಾರುಕಟ್ಟೆ ಭಾರತದಲ್ಲಿ ಎದ್ದುಕಾಣುತ್ತಿದೆ. ದೇಶ ಸುತ್ತಿ ‘ಮಾರುಕಟ್ಟೆ ಭಾರತದಲ್ಲೇ ತಯಾರಿಸು’ ಇಲ್ಲವೇ ಬೆಳೆ, ನಿನಗೆ ಬೇಕಾದಷ್ಟು ಭೂಮಿ ನೀಡುತ್ತೇವೆ ಎನ್ನುತ್ತಿದ್ದಾರೆ ಪ್ರವರ್ತಕರು. ಬ್ರಿಟೀಷರು ಮಾರುಕಟ್ಟೆ ಸೃಷ್ಟಿಸಿದರು. ಕೊಳ್ಳೆಹೊಡೆದರು. ಆದರೆ ಮಾರುಕಟ್ಟೆ ಭಾರತದಲ್ಲಿ ಹೂಡಿಕೆದಾರರನ್ನು ಆಹ್ವಾನಿಸಿ ಭೂಮಿ ಕೊಟ್ಟು ಹೂಡಿಕೆ ಮಾಡಿ ಹೊಡೆದುಕೊಂಡು ಹೋಗಿ ಎಂಬ ಸಂದೇಶ ಪ್ರವರ್ತಕರಿಂದ ರವಾನೆಯಾಗುತ್ತಿದೆ. ಮಾತುಸೋತ ಭಾರತ ಅಂದಿದ್ದರು ಸಾಹಿತಿ ಯು.ಆರ್. ಅನಂತಮೂರ್ತಿ. ಅದು ಮಾರುಕಟ್ಟೆ ಭಾರತದಲ್ಲಿ ಮತ್ತಷ್ಟು ನಿಜವಾಗುತ್ತಿದೆ. ಮಾತು ಸೋಲುವಂತೆ ಮಾಡುವ ವ್ಯವಸ್ಥಿತ ತಂತ್ರಗಳು ಹಗಲಿರುಳು ಹೆಣಿಯಲಾಗುತ್ತಿದೆ. ಒಂದು ಸುಳ್ಳು ಸಾವಿರ ಬಾರಿ ಹೇಳಿ ಸತ್ಯಗೊಳಿಸುವುದು ಮಾರುಕಟ್ಟೆ ಭಾರತದ ಪ್ರಮುಖ ಅಜೆಂಡ.

ಮಾರುಕಟ್ಟೆ ಭಾರತ ಸೃಷ್ಟಿಸುತ್ತಿರುವ ಅವಾಂತರ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ, ಇಡೀ ಮಾರುಕಟ್ಟೆ ಭಾರತವೇ ಬಿಕರಿಯಾಗುವ ಕಾಲ ದೂರವಿಲ್ಲ ಎಂಬ ಅನುಮಾನ ಕಾಡುತ್ತಿದೆ. ದೇಶೀಯ ಚಿಂತಕರು ಮಾರುಕಟ್ಟೆ ಭಾರತ ಸೃಷ್ಟಿಸಿರುವ ಕಂದರ ಸಾಮಾಜಿಕ ಅಂತರವನ್ನು ಕಡಿಮೆ ಮಾಡಲು ಈ ಮೂಲಕ ಕೋಟ್ಯಂತರ ಮಂದಿಯ ಜೀವಗಳ ರಕ್ಷಣೆಗೆ ತಯಾರಿ ನಡೆಸಬೇಕಾದ ಜರೂರತ್ತು ಇದೆ.

ಕೆ.ಈ.ಸಿದ್ದಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular