ಈವರೆಗಿನ ಚರಿತ್ರೆಗಳೆಲ್ಲಾ ಸಂಪೂರ್ಣ ಸತ್ಯ ಎಂದು ಭಾವಿಸಬೇಕಿಲ್ಲ. ಅವೆಲ್ಲ ಅರ್ಧ ಸತ್ಯ ಎಂದೇ ತಿಳಿಯಬೇಕು. ಚರಿತ್ರೆಯನ್ನು ಬರೆದವರೆಲ್ಲಾ ಯಾರದೋ ಹಂಗಿನಲ್ಲಿ ಬದುಕಿ ಅವರ ಅಪೇಕ್ಷೆಯಂತೆ ಬರೆದಿರಬಹುದು. ಸ್ವತಂತ್ರವಾಗಿ ಬರೆದಿರಬಹುದಾದ ಸಂದರ್ಭವೂ ಅದಲ್ಲ. ಯಾರದೋ ಚರಿತ್ರೆಯನ್ನು ಬರೆದು ಜನಸಾಮಾನ್ಯರ ಬದುಕಿನ ಚಿತ್ರಣವನ್ನು ಆಗ ಬರೆಯಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ನಡುವೆ ಇರುವ ಚರಿತ್ರೆ ಅರ್ಧ ಸತ್ಯವಾಗಿದ್ದು, ಈಗ ಪೂರ್ಣ ಸತ್ಯದ ಚರಿತ್ರೆಯನ್ನು ಕಟ್ಟಿಕೊಡಬೇಕಾಗಿದೆ ಎಂದು ಲೇಖಕ ಪ್ರೊ.ಹಿ.ಚಿ.ಬೋರಲಿಂಗಯ್ಯ ಸಲಹೆ ನೀಡಿದರು.
ತುಮಕೂರಿನ ಕನ್ನಡ ಭವನದಲ್ಲಿ ಬಹುಮುಖಿ ಗೆಳೆಯರ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಅಮ್ಮಸಂದ್ರ ಸುರೇಶ್ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಕೊಡುಗೆಗೆ ಹಳ್ಳಿಗಳು ಮಹತ್ತರ ಪಾತ್ರ ನೀಡಿವೆ. ಆದರೆ ಹಳ್ಳಿಗಳಲ್ಲಿ ಈಗ ಸಂಸ್ಕೃತಿ ಮರೆಯಾಗುತ್ತಿದೆ. ಇಡೀ ಸಮಾಜ ಮತ್ತು ರಾಜಕಾರಣ ವ್ಯವಸ್ಥೆ ಅತ್ಯಂತ ಸಂಕುಚಿತ ಮತ್ತು ಸಂಕೀರ್ಣವಾಗುತ್ತಿದೆ. ಸಂಕ್ರಮಣದ ಸ್ಥಿತಿಯಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ. ಜನಸಾಮಾನ್ಯರ ಸ್ಥಿತಿಗತಿಗಳ ಬಗ್ಗೆ ಚಿಂತಿಸುವವರು ಕಡಿಮೆಯಾಗುತ್ತಿದ್ದಾರೆ. ಗ್ರಾಮೀಣ ಸಮುದಾಯದ ಕಲೆಗಳು ಮೂಲೆಗುಂಪಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಗಳ ಜ್ಞಾನವನ್ನು ಪುನರ್ ಸ್ಥಾಪಿಸುವ ಮಹತ್ವದ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ ಎಂದರು.
ಹಿರಿಯ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಮನುಷ್ಯನ ಬದುಕು ಮತ್ತು ಸಮಾಜವನ್ನು ಹತ್ತಿರದಿಂದ ನೋಡುವ ದೃಷ್ಟಿಕೋನದ ಬರವಣಿಗೆಗಳು ಡಾ.ಅಮ್ಮಸಂದ್ರ ಸುರೇಶ್ ಅವರಿಂದ ಹೊರಬರುತ್ತಿರುವುದು ಅತ್ಯಂತ ಶ್ಲಾಘನೀಯ. ಬರಹಗಾರರಿಗೆ ತಮ್ಮ ಸುತ್ತಲಿನ ಸಂದರ್ಭಗಳು ಪ್ರೇರಣೆಯಾಗಬೇಕು. ಆಗ ನಿಜವಾದ ಸಾಹಿತ್ಯ ಹೊರಬರಲು ಸಾಧ್ಯವಾಗುತ್ತದೆ. ನಮ್ಮ ಸಮಾಜದಲ್ಲಿ ಹಲವು ಏರಿಳಿತಗಳಿವೆ. ಮಹಿಳೆಯರ ಮೇಲಿನ ದೌರ್ಜನ್ಯ, ಸಾಮಾಜಿಕ ಅಸಮಾನತೆ ಎಲ್ಲವೂ ಇದೆ. ಇವೆಲ್ಲವನ್ನು ಅವಲೋಕಿಸಿ ಬರಹಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಸಾಹಿತಿಗಳಿಂದ, ಲೇಖಕರಿಂದ ಆಗಬೇಕಿದೆ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಕೆ,ಎಸ್. ಸಿದ್ದಲಿಂಗಪ್ಪ, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ಟಿ.ಮುದ್ದೇಶ್, ಸಾಮಾಜಿಕ ಹೋರಾಟಗಾರ ಸಾ.ಚಿ.ರಾಜಕುಮಾರ, ಬಹುಮುಖಿ ಗೆಳೆಯರ ಬಳಗದ ಸಂಚಾಲಕ ಹಡವನಹಳ್ಳಿ ವೀರಣ್ಣಗೌಡ ಮಾತನಾಡಿದರು.
ಮೈಸೂರಿನ ಡಾ.ಪ್ರಸನ್ನ, ಬಹುಮುಖಿ ಗೆಳೆಯರ ಬಳಗದ ದಂಡಿನಶಿವರ ಮಂಜುನಾಥ್, ಎಂ.ವೈ.ಗಂಗಣ್ಣ ಸಂಗಡಿಗರು ಪ್ರಾರ್ಥಿಸಿದರು. ವಸಂತಕುಮಾರ್ ಹೆಚ್.ಎಂ. ಸ್ವಾಗತಿಸಿ, ಜಯಣ್ಣ ವಂದಿಸಿದರು. ವಿವೇಕ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.


