ಕಳೆದ ಎರಡು ವರ್ಷದಿಂದ ಈಚೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಬಗ್ಗೆ ಬಿಜೆಪಿ ಮುಖಂಡರು ಮಾತನಾಡಿದಾಗ ಸಿ.ಟಿ. ರವಿ ಧ್ವನಿ ಬಿದ್ದುಹೋಗಿತ್ತಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆರೋಪಿಸಿದರು. ಯೋಗೀಶ್ವರ್ ಮಾತನಾಡಿದರು. ಶಾಸಕ ಬಸನಗೌಡ ಯತ್ನಾಳ್ ಮುಖಮಂತ್ರಿ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಹರಿಹಾಯ್ದರು. ನಿರಂತರವಾಗಿ ತಮ್ಮ ಪಕ್ಷದ ಮುಖ್ಯಮಂತ್ರಿಗಳ ವಿರುದ್ಧವೇ ಮಾತನಾಡಿದರು. ಆಗ ಸಿ.ಟಿ.ರವಿ ಅವರ ಧ್ವನಿ ಅಡಗಿಹೋಗಿತ್ತಾ? ಯಾರಾದರೂ ರವಿ ದನಿಯನ್ನು ಕತ್ತರಿದ್ದರಾ? ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡರೇ ಬಿಜೆಪಿ ಮುಖ್ಯಮಂತ್ರಿ ಮತ್ತು ಅವರ ಪುತ್ರ, ಅಳಿಯನ ಬಗ್ಗೆ ಆರೋಪಿಸಿದರು. ಆಗ ಸಿ.ಟಿ.ರವಿ ಉತ್ತರಿಸಿದರ. ಯಾಕೆ ಮೌನವಾಗಿದ್ದರು ಹೇಳಲಿ. ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಮುಖಂಡರಿಂದ ಒಂದು ಸೊಲ್ಲೂ ಇಲ್ಲ. ಆಗ ಏನಾಗಿತ್ತು ಸಿ.ಟಿ.ರವಿ ಅವರಿಗೆ? ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ನಿನ್ನೆ ಮಾತನಾಡಿದ್ದ ಶಿವಕುಮಾರ್, ನಾವು ಮಾತನಾಡುವುದನ್ನು ನೀವು ತೋರಿಸುತ್ತೀರಿ. ಹಿಂದೆ, ಯಡಿಯೂರಪ್ಪ ಹಾಗು ಅನಂತಕುಮಾರ್ ಅವರು ಮಾತನಾಡಿದ್ದನ್ನು ನೀವು ತೋರಿಸಿದ್ದೀರಿ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೆ? ಅದೇ ರೀತಿ ವಿಶ್ವನಾಥ್, ಯತ್ನಾಳ್ ಮಾತನಾಡಿರುವುದನ್ನೂ ತೋರಿಸಿದ್ದೀರಿ. ಆದರೆ ಆ ಸಂಭಾಷಣೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಕಾಂಗ್ರೆಸ್ ನಲ್ಲಿ ಹಿಂದೆ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ವಿರುದ್ಧ ಪಿತೂರಿ ಮಾಡಿದ್ದವರೇ ಈಗ ನನ್ನ ವಿರುದ್ದವೂ ಒಳಸಂಚು ಮಾಡುತ್ತಿದ್ದಾರೆಂಬ ಸಿ.ಟಿ.ರವಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿ ನಾಯಕರ 30 ಕಮಿಷನ್ ಬಗ್ಗೆ ಎಚ್. ವಿಶ್ವನಾಥ್ ಮಾತನಾಡಿದರು. ಅವರನ್ನು ಯಾಕೆ ಪ್ರಶ್ನೆ ಮಾಡಲಿಲ್ಲ. ಬಿಜೆಪಿ ಸರ್ಕಾರ ಹುಟ್ಟಿರುವುದು ಮತ್ತು ಬದುಕಿರುವುದು ಭ್ರಷ್ಟಾಚಾರದಿಂದ. ಭ್ರಷ್ಟಾಚಾರದಲ್ಲಿ ಈ ಸರ್ಕಾರವನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಜವಾಬ್ದಾರಿ. ಆ ಕುರಿತು ಕೆಲಸ ನಡೆಯುತ್ತಿದೆ. ನಮ್ಮ ಕಾಲ ಮೇಲೆ ನಾವು ನಿಲ್ಲುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಧ್ವಜ ಹಾರಿಸುತ್ತೇವೆ ಎಂದು ಹೇಳಿದರು.
ಶಾಲೆಗಳ ಆರಂಭ ಒಳ್ಳೆಯ ಬೆಳವಣಿಗೆ. ಮನೆಯಲ್ಲೇ ಇದ್ದ ಮಕ್ಕಳಿಗೆ ಬೇರೊಂದು ಪರಿಸರದ ಅಗತ್ಯವಿದೆ. ಟ್ಯಾಬ್, ಮೊಬೈಲ್ ನಲ್ಲೇ ಮುಳುಗಿದ್ದ ಮಕ್ಕಳು ಹೊಸ ಪರಿಸರಕ್ಕೆ ಹೊಂದಿಕೊಳ್ಳಬೇಕು. ಪರಿಸರ ಬದಲಾವಣೆಯಿಂದ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ತಿಳಿಸಿದರು.


