ಆಂಧ್ರಪ್ರದೇಶ, ತೆಲಂಗಾಣದಲ್ಲಿ ನಕ್ಸಲರು ಮತ್ತು ಛತ್ತೀಸ್ ಗಡದಲ್ಲಿ ನಕ್ಸಲ್ ಕೇಡರ್ ಗಳು ನಿಯಂತ್ರಿಸಿದಂತೆ ಆರ್.ಎಸ್.ಎಸ್ ಕಾರ್ಯಕರ್ತರನ್ನು ನಾಗ್ಪುರದಿಂದ ನಿಯಂತ್ರಿಸಲಾಗುತ್ತಿದೆ. ನಿಜವಾಗಿಯೂ ಆರ್.ಎಸ್.ಎಸ್ ಕಾರ್ಯಕರ್ತರಿಗೆ ಬೆಲೆ ಇಲ್ಲದಂತೆ ಆಗಿದೆ ಎಂದು ಛತ್ತೀಸ್ ಗಡ ಮುಖ್ಯಮಂತ್ರಿ ಭೂಪೇಸ್ ಬಾಗೆಲ್ ಗಂಭೀರ ಆರೋಪ ಮಾಡಿದ್ದಾರೆ.
ಬೇರೆ ರಾಜ್ಯಗಳಲ್ಲಿ ಹಿರಿಯ ಕೇಡರ್ ಗಳ ನಿರ್ದೇಶನದಲ್ಲಿ ನಡೆದಂತೆ ನಮ್ಮ ರಾಜ್ಯದಲ್ಲೂ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಸ್ಥಳೀಯ ಆರ್.ಎಸ್.ಎಸ್ ಕಾರ್ಯಕರ್ತರು ನಾಗ್ಪುರದಿಂದ ನಿಯಂತ್ರಿಸಲ್ಪಡುತ್ತಿದ್ದಾರೆ ಎಂದು ಕವಾರ್ದ ಪ್ರಕರಣ ಉಲ್ಲೇಖಿಸಿ ಬಾಗೆಲ್ ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಬಾಗೆಲ್ ಆರ್.ಎಸ್.ಎಸ್. ಮುಖ್ಯಕಚೇರಿ ನಾಗ್ಪುರದಲ್ಲಿದೆ. ಮಹಾರಾಷ್ಟ್ರದಲ್ಲಿ ಇದ್ದು ಅಲ್ಲಿಂದಲೇ ಎಲ್ಲವೂ ನಿಯಂತ್ರಿಸಲ್ಪಡುತ್ತಿದೆ ಎಂದು ಆಪಾದಿಸಿದ್ದಾರೆ.
ಛತ್ತೀಸ್ ಗಡದಲ್ಲಿ 15 ವರ್ಷಗಳಿಂದಲೂ ಆರ್.ಎಸ್.ಎಸ್ ಯಾವುದೇ ಕೆಲಸ ಮಾಡಿಲ್ಲ. ಆರ್.ಎಸ್.ಎಸ್. ಕಾರ್ಯಕರ್ತರನ್ನು ಬಾಂಡೆಡ್ ಕಾರ್ಮಿಕರಂತೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಅದೇ ರೀತಿ ಈಗ ರಾಜ್ಯದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರನ್ನು ನಾಗ್ಪುರದಿಂದ ನಿಯಂತ್ರಿಸಲಾಗುತ್ತಿದೆ ಎಂದು ದೂರಿದರು.
ನಕ್ಸಲರು ಮತ್ತು ಕೇಡರ್ ಗಳು ಬುಲೆಟ್ ಗಳ ಮೂಲಕ ನಿಯಂತ್ರಣ ಮಾಡಿದರೆ, ಅದೇ ಪರಿಸ್ಥಿತಿ ಆರ್.ಎಸ್.ಎಸ್.ನಲ್ಲೂ ಇದೆ. ಆರ್.ಎಸ್.ಎಸ್. ಮುಖಂಡರು ರೈತರು, ಆದಿವಾಸಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವ್ಯಾಪಾರಿಗಳ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಆದರೆ ಮತಾಂತರ ಮತ್ತು ಕೋಮುವಾದದ ಬಗ್ಗೆ ಮಾತ್ರ ಹಠ ಹಿಡಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.