ತುರುವೇಕೆರೆ ಶಾಸಕ ಮಸಾಲೆ ಜಯರಾಂ ರಾಜಿನಾಮೆಗೆ ನಿರ್ಧರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಇಬ್ಬರೂ ಅನುದಾನ ನೀಡಿಲ್ಲ. ಹಾಗಾಗಿ ನವೆಂಬರ್ 1ರಂದು ರಾಜಿನಾಮೆ ನೀಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಯರಾಂ, ಬಿಜೆಪಿಯ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳ ವಿರುದ್ಧ ಬೇಸರ ಹೊರಹಾಕಿದರು.
ನನಗೆ ಸಾಂಬಾರು ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಆದರೆ ಇದುವರೆಗೂ ಒಂದು ಪೈಸೆ ಅನುದಾನ ನೀಡಿಲ್ಲ. ನಿಗಮದ ಸಿಬ್ಬಂದಿಗೆ ಸ್ವಂತ ಖರ್ಚಿನಲ್ಲಿ ಕಾಫಿ, ಟೀ ಕೊಡಿಸಬೇಕಾದ ಪರಿಸ್ಥಿತಿ ಬಂದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ನವೆಂಬರ್ 1ರಂದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಈಗ ನನಗೆ ವಹಿಸಿರುವ ಸಾಂಬಾರು ಮಂಡಳಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸುವುದಿಲ್ಲ. ಅನುದಾನವೇ ನೀಡದಿದ್ದರೆ ನಾನು ಅಲ್ಲಿ ಕುಳಿತು ಏನು ಮಾಡಲಿ. ಇದು ನನಗೆ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಪರವಾಗಿ ಕೆಲಸ ಮಾಡುವಂತಹ ಉತ್ತಮ ನಿಗಮ ಮಂಡಳಿ ವಹಿಸಿದರೆ ಅಧಿಕಾರ ವಹಿಸಿಕೊಳ್ಳುತ್ತೇನೆ. ಇಲ್ಲದಿದ್ದರೆ ನನ್ನ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿ.ಸುರೇಶ್ ಗೌಡ ರಾಜಿನಾಮೆ ನೀಡಿದ ಕೆಲವೇ ದಿನಗಳಲ್ಲಿ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಅವರಿಂದ ಇಂತಹ ಹೇಳಿಕೆ ಬಂದಿರುವುದು ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.