ಮಾಜಿ ಸಂಸದ ಮತ್ತು ಮಾಧ್ಯಮ ಸಮನ್ವಯಕಾರ ಸಲೀಂ ನಡುವೆ ನಡೆದ ಮಾತುಕತೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪ ಮಾಡಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಾಧ್ಯಮ ಸಮನ್ವಯಕಾರ ಸಲೀಂ ಅವರನ್ನು 6 ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಸಲೀಂ ಜತೆ ಮಾತನಾಡುತ್ತಿದ್ದ ವಿ.ಎಸ್. ಉಗ್ರಪ್ಪ ಅವರಿಗೆ ನೋಟಿಸ್ ನೀಡಲಾಗಿದೆ.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಮಾಧ್ಯಮ ಗೋಷ್ಠಿ ಆರಂಭಕ್ಕೂ ಮೊದಲು ವೇದಿಕೆಯಲ್ಲಿದ್ದ ಸಲೀಂ ಅವರು ಉಗ್ರಪ್ಪ ಕಿವಿಯಲ್ಲಿ ಹೇಳಿರುವ ಮಾತುಗಳು ಮೈಕ್ರೊಪೋನ್ ಮತ್ತು ವಿಡಿಯೋದಲ್ಲಿ ಸೆರೆಯಾಗಿವೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ನಡೆಯುತ್ತಿರುವುದನ್ನು ದೃಢೀಕರಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಾಧ್ಯಮ ಸಮನ್ವಯಕಾರ ಸಲೀಂ ಅವರು ಉಗ್ರಪ್ಪ ಕಿವಿಯಲ್ಲಿ “ಶಿವಕುಮಾರ್ ವಸೂಲಿ ಗಿರಾಕಿ ಕೋಟ್ಯಂತರ ರೂಪಾಯಿ ಕಮಿಷನ್ ಪಡೆಯುತ್ತಿದ್ದಾರೆ. ಇದೊಂದು ದೊಡ್ಡ ಹಗರಣ. 6-8 ಪರ್ಸೆಂಟ್ ಕಮಿಷನ್ ಪಡೆಯುವ ಬದಲು 10-12ರಷ್ಟು ಕಮಿಷನ್ ಪಡೆಯುತ್ತಾರೆ. ಇದು ಡಿಕೆ ಅವರ ಅಡ್ಜೆಸ್ಟ್ ಮೆಂಟ್. ಮುಳಗುಂದ ಅವರಿಂದ ಕೋಟಿ ಕೋಟಿ ರೂ ಪಡೆದಿದ್ದಾರೆ. ಮುಳಗುಂದ ಇದನ್ನು ಮಾಡಿದ್ದಾರೆ” ಎಂದು ಉಗ್ರಪ್ಪ ಕಿವಿಯಲ್ಲಿ ಸಲೀಂ ಹೇಳಿರುವ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ.
ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಇದು ನಡೆದಿದೆ. ಡಿ.ಕೆ.ಶಿವಕುಮಾರ್ ಕುಡಿದಾಗ ಮಾತನಾಡಿದಂತೆ ಮಾತನಾಡುತ್ತಾರೆ ಎಂದು ಸಲೀಂ ಡಿಕೆಶಿಯಂತೆಯೇ ಮಾತನಾಡಿದ್ದಾರೆ. ಸಿದ್ದರಾಮಯ್ಯ ಧ್ವನಿ ತುಂಬಾ ಗಂಭೀರವಾಗಿರುತ್ತದೆ ಎಂದಿದ್ದಾರೆ.
ಉಗ್ರಪ್ಪ ಇದನ್ನು ಕೇಳಿಸಿಕೊಂಡು ಶಿವಕುಮಾರ್ ನಾಯಕತ್ವದಲ್ಲಿ ಪಕ್ಷ ವಿಫಲವಾಗಿದೆ ಎಂದು ಹೇಳಿರುವುದು ದಾಖಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕೆಪಿಸಿಸಿ ಶಿಸ್ತು ಸಮಿತಿ ಸಲೀಂ ಅವರನ್ನು 6 ವರ್ಷಗಳ ಕಾಲ ಅಮಾನತು ಮಾಡಿದೆ. ಈ ಬಗ್ಗೆ ಉಗ್ರಪ್ಪ ಪ್ರತಿಕ್ರಿಯಿಸಿದ್ದು ಡಿ.ಕೆ.ಶಿವಕುಮಾರ ಅವರನ್ನು 3-4 ದಶಕಗಳಿಂದ ಬಲ್ಲೆ, ಕರ್ನಾಟಕದ ಏಳ್ಗೆ ಗಾಗಿ ಬದ್ದತೆಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಬುಧವಾರ ಡಿ.ಕೆ.ಶಿಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ಪಕ್ಷ ಶಿಸ್ತಿನ ಪಕ್ಷ. ಇದು ಪಕ್ಷಕ್ಕೆ ಮುಜುಗರ ತಂದಿದೆ. ನನ್ನ ಮತ್ತು ಪಕ್ಷದ ಕುರಿತು ಅವರು ಆಂತರಿಕವಾಗಿ ಮಾತನಾಡಿದ್ದಾರೆ. ಅವರ ಮಾತುಗಳನ್ನು ನಿರಾಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.