ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಕಾವು ಏರತೊಡಗಿದೆ. ಕಸಾಪ ಚುನಾವಣೆ ಯಾವು ರಾಜಕೀಯ ಚುನಾವಣೆಗೂ ಕಡಿಮೆ ಇಲ್ಲವೆಂಬುದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ರಾಜಕೀಯ ಅಭ್ಯರ್ಥಿಗಳನ್ನು ಮೀರಿಸುವ ರೀತಿಯಲ್ಲಿ ಪ್ರಚಾರ ಬಿರುಸಾಗಿದೆ. ಮತದಾರರನ್ನು ಸೆಳೆಯಲು ಇನ್ನಿಲ್ಲದ ಆಮಿಷಗಳನ್ನು ಒಡ್ಡಲಾಗುತ್ತಿದೆ. ಕಸಾಪ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಮನೋಸ್ಥಿತಿಗೆ ಹತ್ತಿರವಿರುವ ರಾಜಕೀಯ ನಾಯಕರು ಮತ್ತು ಬೆಂಬಲಿಗರಿಂದ ನೆರವು ಪಡೆದುಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ, ಜಾನಪದ, ಕನ್ನಡ ಕಟ್ಟುವಿಕೆ, ಕನ್ನಡದ ಪ್ರೋತ್ಸಾಹ ಹೀಗೆ ಏನೆಲ್ಲಾ ಸೇವೆ ಮಾಡುತ್ತೇವೆ ಎಂದು ಕರೆದುಕೊಂಡರೂ ಇದು ನೆಪಕ್ಕೆ ಮಾತ್ರ. ಉಳಿದುದೆಲ್ಲವೂ ರಾಜಕೀಯ. ಈ ರೀತಿಯ ಕೆಟ್ಟ ಸಂಪ್ರದಾಯ ಕೆಲವು ವರ್ಷಗಳಿಂದ ಆರಂಭವಾಗಿದೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿರುವುದು ಅಚ್ಚರಿ ಮೂಡಿಸಿದೆ. ವಿಧಾನಪರಿಷತ್, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ರಂಗು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೂ ಬಂದಿದೆ. ಗೆಲುವು ಸಾಧಿಸಲು ಮಾಮೂಲಿ ಚುನಾವಣೆಯಲ್ಲಿ ನಡೆಯುವ ಬಾಡಿನ ಕೂಟ, ತೀರ್ಥದ ಕೂಟ, ನಗದು ಹಂಚಿಕೆ, ಜಾತಿ ಪ್ರಭಾವ ಎಲ್ಲವೂ ನಡೆಯುತ್ತಿರುವುದು ಈವರೆಗೆ ನಡೆದಿರುವ ಪ್ರಚಾರದಲ್ಲಿ ಕಂಡುಬಂದಿರುವ ಸ್ಯಾಂಪಲ್ ಗಳು. ಇಷ್ಟೆಲ್ಲ ನಡೆಯುತ್ತಿದ್ದರೂ ಇವರ ಮೇಲೆ ದಾಳಿ ನಡೆಸುವ ಯಾವುದೇ ಅಧಿಕಾರ ಯಾರಿಗೂ ಇಲ್ಲ. ಚುನಾವಣೆಯಲ್ಲಿ ಆಮಿಷವೊಡ್ಡಬಾರದೆಂಬ ನಿಯಮ ಕನ್ನಡ ಸಾಹಿತ್ಯ ಪರಿಷತ್ ಗೆ ಅನ್ವಯಿಸುವುದಿಲ್ಲ. ಎಷ್ಟೇ ಹಣ ಹಂಚಿಕೆ ಮಾಡಿದರೂ ಕೇಳುವ ಕಾನೂನು ಇಲ್ಲ. ಯಾಕೆಂದರೆ ಸಾಹಿತ್ಯದ ಹೆಸರಿನಲ್ಲಿ ನಡೆಯುವ ಚುನಾವಣೆಯಲ್ಲವೇ ಇದು?
ಇದೇ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಸಾಮಾನ್ಯ ಚುನಾವಣೆಗಳಲ್ಲಿ ನಡೆಯುವ ಆಮಿಷವೊಡ್ಡುವ ರಾಜಕಾರಣ, ಮಾಂಸ, ಹಣ, ಮದ್ಯ ಹಂಚಿಕೆಯನ್ನು ತೀವ್ರವಾಗಿ ವಿರೋಧಿಸುವುದೇನು ಕಮ್ಮಿಯೇ? ಆದರೆ ತಾವು ಇದೇ ಕೆಲಸ ಮಾಡುತ್ತಿದ್ದರೆ ಬೇರೆಯವರು ಸುಮ್ಮನೆ ಕೂರಬೇಕೆಂಬ ಭಾವನೆ ಕೆಲ ಅಧ್ಯಕ್ಷ ಅಭ್ಯರ್ಥಿಗಳಲ್ಲಿದೆ. ರಾಜ್ಯದ ಎಲ್ಲೆಡೆ ಸುತ್ತುತ್ತ ಮತ ಯಾಚನೆ ಮಾಡುತ್ತಿರುವ ಕಸಾಪ ಅಭ್ಯರ್ಥಿಗಳಲ್ಲಿ ಕೆಲವರು ಮಾಮೂಲಿ ಚುನಾವಣೆಯ ದಾಟಿಯಲ್ಲೇ ಹಣ ನೀಡುತ್ತಿರುವುದು, ಮದ್ಯದ ಪಾರ್ಟಿ ಮಾಡುತ್ತಿರುವುದು ಹಣ ಹಂಚಿಕೆಯ ಆರೋಪಗಳು ಕೇಳಿಬರುತ್ತಿವೆ. ಇಂತಹ ವಾಮ ಮಾರ್ಗದ ಪ್ರಚಾರದಲ್ಲಿ ತೊಡಗಿರುವವರು ಹಣ ಚೆಲ್ಲಿ ಗೆದ್ದರೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಏನು ಕೆಲಸ ಮಾಡಬಹುದು ಎಂಬ ಆತಂಕ ಪ್ರಜ್ಞಾವಂತರನ್ನು ಕಾಡುತ್ತಿದೆ.
ಕಸಾಪ ಚುನಾವಣೆಯಲ್ಲಿ ಶಿಕ್ಷಕ ಮತದಾರರ ಸಂಖ್ಯೆ ಹೆಚ್ಚಾಗಿದೆ. ಶಿಕ್ಷಕರು ಸಮಾಜ ಸರಿಮಾರ್ಗದಲ್ಲಿ ನಡೆಯಬೇಕೆಂಬ ಉದ್ದೇಶ ಇಟ್ಟುಕೊಂಡು ವಿದ್ಯಾರ್ಥಿಗಳನ್ನು ತಿದ್ದಿತೀಡಿ ಸರಿದಾರಿಗೆ ತರುವಂತಹ ಶ್ರೇಷ್ಟ ಕೆಲಸದಲ್ಲಿ ನಿರತರಾಗಿರುವ ವರ್ಗ. ಆದರೆ ಇದೇ ಶಿಕ್ಷಕರಲ್ಲಿ ಬಹುತೇಕರು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಣಿಕೆಗಳಿಗೆ ಮನಸೋತುಹೋದವರು. ಮಾಂಸ, ಮದ್ಯದ ಕೂಟ ದಲ್ಲಿ ಭಾಗವಹಿಸಿದವರು. ಹಣವನ್ನೂ ಸಿಗ್ಗಿಲ್ಲದೆ ಪಡೆದುಕೊಂಡವರು. ಈಗ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಬಂದಿದೆ. ಈ ಚುನಾವಣೆಯಲ್ಲೂ ಇದೇ ಶಿಕ್ಷಕ ಮತದಾರ ನಿರ್ಣಾಯಕ ಪಾತ್ರ ವಹಿಸಿರುವುದು ಸತ್ಯದ ಸಂಗತಿ. ಇದನ್ನು ಮನಗಂಡಿರುವ ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೆಲ ಅಭ್ಯರ್ಥಿಗಳು ಶಿಕ್ಷಕರ ಸಮೂಹವನ್ನು ಆಮಿಷಗಳಿಗೆ ಒಳಪಡಿಸುತ್ತಿರುವುದು ಸಾಕಷ್ಟು ಚರ್ಚೆಗೆ ಗುರಿಯಾಗಿದೆ.
ಸಂಪೂರ್ಣ ಪ್ರಾಮಾಣಿಕರು ಅಲ್ಲದೇ ಇದ್ದರೂ ಸ್ವಲ್ಪಮಟ್ಟಿಗಾದರೂ ಪ್ರಾಮಾಣಿಕತೆ, ಪಾರದರ್ಶಕತೆ, ಕಸಾಪ ಮತದಾರರಿಗೆ ಆಮಿಷವೊಡ್ಡದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೂ ಅವರಿಗೆ ಸಾಕಷ್ಟು ಪ್ರಚಾರ ಸಿಗುತ್ತಿಲ್ಲ. ಈ ನೋವು ಅವರನ್ನು ಕಾಡುತ್ತಿದೆ ಕಸಾಪ ಚುನಾವಣೆಯಲ್ಲಿ ಹಣವೇ ಪ್ರಧಾನವಾದರೆ, ಹೆಂಡವೇ ಅಂತಿಮವಾದರೆ, ಮಾಂಸವೇ ನಿತರಂತರ ಸೇವೆಯಾದರೆ, ಸಾಹಿತ್ಯದ ಸೇವೆ ಹೇಗೆ ಸಾಧ್ಯ ಎಂಬ ಅನುಮಾನ ಸಾಹಿತ್ಯಾಸಕ್ತರನ್ನು ಕಾಡತೊಡಗಿದೆ. ಕಸಾಪ ಚುನಾವಣೆಯ ದಿಕ್ಕುದೆಸೆ, ಹೋಗುತ್ತಿರುವ ಮಾರ್ಗವನ್ನು ನೋಡಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡ ಸಾಹಿತಿಗಳು ಬೇಸರಪಟ್ಟುಕೊಳ್ಳುತ್ತಿದ್ದಾರೆ. ಅಬ್ಭಾ! ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ಈ ರೀತಿ ಮಾಡುವುದಾದರೆ, ಇಂತಹ ಕೆಲಸದಲ್ಲಿ ತೊಡಗಿರುವ ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಒಳ್ಳೆಯದು. ಇಂತಹವರಿಂದ ಕನ್ನಡ ಸಾಹಿತ್ಯ ಪರಿಷತ್ ಗೆ ಕೆಟ್ಟ ಹೆಸರು ಬರಲಿದೆ. ಜನರು ಉಗಿಯುವಂತೆ ಆಗುತ್ತದೆ. ಹಾಗಾಗಿ ಪ್ರಜ್ಞಾವಂತರು, ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ನಿರಂತರ ತೊಡಗಿಸಿಕೊಂಡವರನ್ನು ಆಯ್ಕೆ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಮುವತ್ತು ಜಿಲ್ಲೆಗಳಲ್ಲೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೆಲವು ಅಭ್ಯರ್ಥಿಗಳು ರಾಜಕೀಯ ಚುನಾವಣೆಗೆ ಸ್ಪರ್ಧಿಸಿದಾಗ ಪತ್ರಿಕೆಗಳಿಗೆ ಜಾಹಿರಾತು ನೀಡುವಂತೆ ಇಲ್ಲಿಯೂ ನಡೆಯುತ್ತಿದೆ. ತೀರ್ಥಪ್ರಸಾದ ಸೇವನೆ, ಝಣಝಣ ಕಾಂಚಣ, ಬಾಡೂಟದ ಕೂಟಗಳು ನಡೆಸುತ್ತಿರುವುದೇನೂ ರಹಸ್ಯವಾಗಿ ಉಳಿದಿಲ್ಲ. ಮದ್ಯಪ್ರಿಯ ಅಭ್ಯರ್ಥಿಗಳು ಪಾನಗೋಷ್ಟಿಗಳನ್ನು ಏರ್ಪಡಿಸಿ ಮದ್ಯದಲ್ಲೇ ತಲುವಂತೆ ಮಾಡುತ್ತಿದ್ದಾರೆ. ಕೂಟಗಳಲ್ಲಿ ಭಾಗಿಯಾದವರು ಮದ್ಯಪ್ರಿಯ ಅಭ್ಯರ್ಥಿಗಳ ಪರ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಮತದಾರ ಅಲ್ಪಲಾಭಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನೇ ರಾಜಕೀಯ ಅಖಾಡವನ್ನಾಗಿ ಪರಿವರ್ತಿಸುತ್ತಿದ್ದು ಇದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಸಾಹಿತ್ಯನಿಷ್ಟರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ಜಿಲ್ಲೆಗಳಲ್ಲಿ ಸ್ಪರ್ಧಿಸಿರುವ ಕೆಲ ಅಭ್ಯರ್ಥಿಗಳಿಗೆ ಸಾಹಿತ್ಯದ ಗಂಧಗಾಳಿಯೂ ಗೊತ್ತಿಲ್ಲ. ಸಾಹಿತ್ಯ ಕಾರ್ಯಕ್ರಮದಲ್ಲೂ ಭಾಗಿಯಾಗಿಲ್ಲ. ವೇದಿಕೆಯಲ್ಲಿ ಒಂದು ಕವನ ವಾಚಿಸಿದ ಉದಾಹರಣೆಗಳು ಇಲ್ಲ. ಬರೆಯಲೂ ಬಾರದ ಬಾರದ ಅಭ್ಯರ್ಥಿಗಳಿಗೆ ಕೊರತೆ ಏನೂ ಇಲ್ಲ. “ಹಳೆಗನ್ನಡವೆಂದರೆ ನೂಕಾಚೆ ದೂರ” ಎನ್ನುವ ಪಂಡಿತರೂ ಇದ್ದಾರೆ. ವಿದ್ಯಾರ್ಹತೆ ಇದ್ದರೂ ಸಾಹಿತ್ಯ ಎಂದರೆ ವಾಕರಿಸಿಕೊಳ್ಳೋ ಅಭ್ಯರ್ಥಿಗಳಿರುವುದನ್ನು ಸಾಹಿತ್ಯಾಸಕ್ತರು ಗುರುತಿಸಿದ್ದಾರೆ.
ಆದರೆ ಸಾಹಿತ್ಯ ಸೇವೆ, ಕನ್ನಡ ಕಟ್ಟುವ, ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಕನ್ನಡದ ಸಂಸ್ಕೃತಿ, ಭಾಷೆ, ಕಲೆ, ನಾಡು, ನುಡಿ, ಗಡಿ ವಿಷಯಗಳನ್ನು ಮುಂದಿಟ್ಟುಕೊಂಡು ನಿರಂತರ ಸೇವೆಯಲ್ಲಿ ಎಲೆಮರೆಕಾಯಿಯಂತೆ ತೊಡಗಿಕೊಂಡವರು ಕಸಾಪ ಚುನಾವಣೆಯಲ್ಲಿ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ನಿಜ ಸಾಹಿತ್ಯ ಪರಿಚಾರಕರು ಚುನಾವಣೆಯಲ್ಲಿ ಹಣ ವೆಚ್ಚ ಮಾಡಲು ಆಗದೆ ಮಾಂಸ, ಮದ್ಯ ಹಂಚಲು ಸಾಧ್ಯವಾಗದೆ, ಹಣವಂತರು, ಪ್ರಭಾವಿಗಳ ಮುಂದೆ ಅಕ್ಷರಶಃ ಬೆವೆತು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತ ಮತದಾರ ನಿಜವಾದ ಕನ್ನಡ ಪರಿಚಾರಕರನ್ನು ಕನ್ನಡ ಸಾಹಿತ್ಯ ಪರಿಷತ್ ಗೆ ಒಳ್ಳೆಯ ಹೆಸರು ತರುವವರನ್ನು ಆಯ್ಕೆ ಮಾಢಬೇಕಾದ ಜರೂರತ್ತು ಇದೆ.
ಕೆ.ಈ.ಸಿದ್ದಯ್ಯ