Thursday, October 17, 2024
Google search engine
Homeಮುಖಪುಟಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ - ಕುಮಾರಸ್ವಾಮಿ ವ್ಯಂಗ್ಯ

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ – ಕುಮಾರಸ್ವಾಮಿ ವ್ಯಂಗ್ಯ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷವನ್ನು ಟೀಕೆ ಮಾಡದಿದ್ದರೆ ನಿದ್ದೆ ಬರಲ್ಲ ಅಂತ ಕಾಣುತ್ತೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

ಸಿಂದಗಿ ಕ್ಷೇತ್ರದಲ್ಲಿ ಅವರ ಪಕ್ಷ 3ನೇ ಸ್ಥಾನದಲ್ಲಿತ್ತು. ಇಲ್ಲಿ ಕಾಂಗ್ರೆಸ್ 2ನೇ ಸ್ಥಾನಕ್ಕೆ ಬಂದ ಇತಿಹಾಸವೇ ಇಲ್ಲ. ಈಗ ನೋಡಿದರೆ ರಾಜಕೀಯ ಬದುಕು ಕೊಟ್ಟ ಪಕ್ಷವನ್ನೇ ನಿಂದಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗ ಎಂ.ಸಿ. ಮನಗೂಳಿ ನಿಧನದ ಅನುಕಂಪದಲ್ಲಿ ತೇಲುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಇದ್ದ ಅವರ ಪುತ್ರನನ್ನು ಹೈಜಾಕ್ ಮಾಡಿ ಜನರಿಗೆ ತಮ್ಮ “ಸಿದ್ದಕಲೆ” ದರ್ಶನ ಅಗುತ್ತಿದ್ದಂತೆಯೇ ಈಗ ಅನುಕಂಪ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರ.

ಬುದ್ದಿವಂತ ಮತದಾರರು ಜೆಡಿಎಸ್ ಪಕ್ಷಕ್ಕೆ ಮತ ಹಾಕಲ್ಲ ಎಂದು ಸಿದ್ದಹಸ್ತರು ಫರ್ಮಾನು ಹೊರಡಿಸಿದ್ದಾರೆ. ಜನರು ಇವರ ಜೇಬಿನಲ್ಲಿ ಇದ್ದಾರಾ? ಇದು ಸಿಂದಗಿ ಜನರಿಗೆ ಅಪಮಾನ ಮಾಡುವ ಅಹಂಕಾರದ ಹೇಳಿಕೆ. ಅವರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಏಕಕಾಲದಲ್ಲೇ ಟೀಕಿಸಿದ್ದಾರೆ.

ಕುಮಾರಸ್ವಾಮಿ ಅವರ ಟೀಕೆಗಳನ್ನು ನೆಗ್ಲೆಕ್ಟ್ ಮಾಡ್ತೀನಿ ಅನ್ನುತ್ತಲೇ ಕುಮಾರಸ್ವಾಮಿ ಸುತ್ತಲೇ ಯಾಕೆ ಗಿರಕಿ ಹೊಡೆಯುತ್ತೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ನಿಮ್ಮ ರಾಜಕೀಯ ಉಳಿಗಾಲಕ್ಕಾಗಿ ನನ್ನನ್ನು, ದೇವೇಗೌಡರನ್ನು ಟೀಕೆ ಮಾಡುವುದು ನಿಮಗೆ ಅನಿವಾರ್ಯ. ಅದು ತಪ್ಪಿದರೆ, ನಿಮಗೆ ಬೇರೆ ವಿಧಿ ಇಲ್ಲ. ಕಾಂಗ್ರೆಸ್ ನಲ್ಲಿ ನಿಮಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಬಗ್ಗೆ ಮಾತನಾಡಲ್ಲ ಅಂತೀರಿ. ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದೇನೆ ಅನ್ನುತ್ತೀರಿ. ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ ಎಂದು ಗೋಳಾಡುತ್ತೀರಿ. ಮತ್ಯಾಕೆ ನಮ್ಮ ಬಗ್ಗೆ ಮಾತು? ಬಿಜೆಪಿಯವರು ನಿಮ್ಮ ಹೇಳಿಕೆಗಳಿಗೆ ಕ್ಯಾರೇ ಅನ್ನುವುದಿಲ್ಲ. ನಮ್ಮ ಬಗ್ಗೆ ಮಾತನಾಡದಿದ್ದರೆ ನಿಮಗೆ ಗತಿಯೇ ಇಲ್ಲ” ಎಂದು ಲೇವಡಿ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಮೈತ್ರಿಯ ಭಾಗವಾಗಿದ್ದುಕೊಂಡೇ ಬೆನ್ನಿಗಿರಿದ ನಿಮ್ಮ ಹೀನ ರಾಜಕೀಯ ಯಾರಿಗೆ ಗೊತ್ತಿಲ್ಲ ಹೇಳಿ? ನಿಮ್ಮ ಕುತಂತ್ರ ಹೆಜ್ಜೆಗಳು ಎಲ್ಲೆಲ್ಲಿ ಮೂಡಿದವು ಎಂಬುದು ಜನರಿಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಅಂತಹ ಚಕ್ರವ್ಯೂಹ ರಚಿಸಿರಲಿಲ್ಲ ಎಂದಾದರೆ ‘ಬ್ರೂಟಸ್ ಪಾಲಿಟೆಕ್ಸ್ ಮಾಡಿ ನಮ್ಮ ಅಭ್ಯರ್ಥಿಯನ್ನು ಸೋಲಿಸಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸೋಲಿನ ಕಾರಣ ಮಂಡ್ಯ ಜನತೆಗೆ ಗೊತ್ತಿದೆ. ನಿಖಿಲ್ 6 ಲಕ್ಷ ಮತ ಗಳಿಸಿದ್ದರು. ರೈತಸಂಘ, ಕಾಂಗ್ರೆಸ್, ಬಿಜೆಪಿ, ಕೆಲ ಮಾಧ್ಯಮಗಳು ಸೇರಿ ʼಮ್ಯಾನೇಜ್ʼ ಮಾಡಿದ ಚುನಾವಣೆ ಅದು. ಕೌರವರು ಮಹಾಭಾರತದಲ್ಲಿ ರಚಿಸಿದ್ದ ಚಕ್ರವ್ಯೂಹದಲ್ಲಿ ಅಭಿಮನ್ಯು ಹೇಗೆ ಸಿಲುಕಿದ್ದನೋ ಹಾಗೇ ಇವರೆಲ್ಲರ ಷಡ್ಯಂತ್ರದ ಚಕ್ರವ್ಯೂಹದಲ್ಲಿ ನಿಖಿಲ್ ಸಿಲುಕಿದ್ದರು ಎಂದು ಹೇಳಿದ್ದಾರೆ.

ʼಸಿದ್ದಕಲೆʼಯ ನಿಷ್ಣಾತರಿಗೆ ಹೊಸ ಕನಸು ಬಿದ್ದ ಹಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ವ್ಹೀಕ್ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಗಲು ಕನಸು ಕಾಣುವವರಿಗೆ ನನ್ನ ಅನುಕಂಪವಿದೆ. ಜೆಡಿಎಸ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ ಮತ್ತೆ ಮತ್ತೆ ಅವರು ಅದೇ ಜಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular