ಕನ್ನಡಚಿತ್ರರಂಗದಲ್ಲಿ ಖಳನಟನಾಗಿ ಖ್ಯಾತಿ ಗಳಿಸಿದ್ದ ಸತ್ಯಜಿತ್ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಅಕ್ಟೋಬರ್ 10ರಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೊದಲ ಹೆಸರು ಸೈಯದ್ ನಿಜಾಮುದ್ದೀನ್. ನಂತರ ಆ ಹೆಸರು ಬದಲಿಸಿ ಸತ್ಯಜಿತ್ ಎಂದು ನಾಮಕರಣ ಮಾಡಲಾಯಿತು.
ಹೃದಯಾಘಾತಕ್ಕೆ ಒಳಗಾಗಿದ್ದರಿಂದ ಕಳೆದ ಕೆಲವು ದಿನಗಳ ಹಿಂದೆ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಸತ್ಯಜಿತ್ ಅವರಿಗೆ ಕಳೆದ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಬಸ್ ಚಾಲಕರಾಗಿದ್ದ ಸತ್ಯಜಿತ್ ಅವರಿಗೆ ನಟನೆಯಲ್ಲಿ ಆಸಕ್ತಿ ಬೆಳೆಯುತ್ತದೆ. ಹಾಗಾಗಿ ರಂಗಭೂಮಿಯಲ್ಲಿ ತಮ್ಮ ತೊಡಗಿಸಿಕೊಂಡು ಹಲವು ನಾಟಕಗಳಲ್ಲಿ ಅಭಿನಯಿಸುತ್ತಾರೆ. ನಂತರ ಸಿನಿಮಾ ಪ್ರವೇಶ ಪಡೆಯುತ್ತಾರೆ.
2000ನೇ ಇಸವಿಯಲ್ಲಿ ಸತ್ಯಜಿತ್ ಅತಿಹೆಚ್ಚು ಬೇಡಿಕೆಯ ಖಳನಟರಾಗಿದ್ದರು. ಹಲವು ಚಿತ್ರಗಳಲ್ಲಿ ನಟಿಸುವಂತೆ ಆಹ್ವಾನವೂ ಬಂತು. ಪ್ರತಿಯೊಂದು ಚಿತ್ರಗಳಲ್ಲೂ ಖಳನಟರಾಗಿ ಉತ್ತಮ ಅಭಿನಯ ಮಾಡಿದರು. ಶಿವ ಮೆಚ್ಚಿದ ಕಣ್ಣಪ್ಪ, ಚೈತ್ರದ ಪ್ರೇಮಾಂಜಲಿ, ಪುಟ್ನಂಜ, ಆಪ್ತಮಿತ್ರ, ಭೂಮಿ ತಾಯಿ ಆಣೆ, ಗಡಿಬಿಡಿಗಂಡ, ಅಂತಿಮ ತೀರ್ಪು, ನಮ್ಮೂರ ಹಮ್ಮೀರ, ತಾಯಿಗೊಬ್ಬ ಕರ್ಣ, ರಾಜ ಯುವರಾಜ, ರಣರಂಗ, ಯುದ್ದಕಾಂಡ, ಎಮರ್ಜೆನ್ಸಿ, ಯಮಕಿಂಕರ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು.
ಸತ್ಯಜಿತ್ 600 ಕನ್ನಡ ಚಿತ್ರಗಳಲ್ಲಿ ಖಳನಟರಾಗಿ ನಟಿಸಿ ಹೆಸರು ತಮ್ಮದೇ ಆದ ಛಾಪು ಮೂಡಿಸಿದ್ದರು. ಅಂಕುಶ್ ಎಂಬ ಹಿಂದಿ ಚಿತ್ರದಲ್ಲೂ ನಟಿಸಿದ್ದರು ಸತ್ಯಜಿತ್. ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಟೈಗರ್ ಪ್ರಭಾಕರ್, ಉಪೇಂದ್ರ, ಜಗ್ಗೇಶ್ ಸೇರಿದಂತೆ ಬಹುತೇಕ ಎಲ್ಲಾ ನಾಯಕ ನಟರ ಕನ್ನಡ ಚಿತ್ರಗಳಲ್ಲಿ ನಟಿಸಿರುವುದು ಸತ್ಯಜಿತ್ ವಿಶೇಷ.
ರಮೇಶ್ ಅರವಿಂದ, ಸುದೀಪ್, ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್, ಮಾಲಾಶ್ರೀ ಚಿತ್ರಗಳಲ್ಲೂ ಸತ್ಯಜಿತ್ ಖಳನಟರಾಗಿ ಅಭಿನಯಿಸಿದ್ದಾರೆ. ಆಪ್ತಮಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು ಸತ್ಯಜಿತ್.


