ಬಿಜೆಪಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರದಲ್ಲಿದೆ. ಆಪರೇಷನ್ ಕಮಲ ನಡೆಸಿ ನಮ್ಮ ಶಾಸಕರನ್ನು ಕರೆದುಕೊಂಡು ಹೋಗಿ ಯಡಿಯೂರಪ್ಪ ಅಧಿಕಾರಕ್ಕೆ ಬಂದರು. ಆದರೆ ಯಡಿಯೂರಪ್ಪ ಉತ್ತಮ ಆಡಳಿತ ನಡೆಸಲು ಆಗಲಿಲ್ಲ. ಹಾಗಾಗಿ ಕೆಳಗಿಳಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲವೆಂದು ಅವರನ್ನು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಕಳಿಸಿದ್ದಾರೆ. ಈಗ ಅವರು ನಿತ್ಯ ಯಾವ ಏಟು ಕೊಡುತ್ತಿದ್ದಾರೆ ನೋಡುತ್ತಿದ್ದೀರಾ? ಕಾಂಗ್ರೆಸ್ ನಿಂದ ಹೋದ ಶಾಸಕರು ಯಡಿಯೂರಪ್ಪ ಇಲ್ಲದಿದ್ದರೆ ಅಲ್ಲಿಗೆ ಹೋಗುತ್ತಿರಲಿಲ್ಲ ಎಂದು ಈಗ ಅವರೂ ಗಾಬರಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಅನ್ನಭಾಗ್ಯ ಕೊಟ್ಟರು. ಕೇವಲ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಕೊಟ್ಟರಾ? ಇತರೆ ಯೋಜನೆಗಳನ್ನು ಕೇವಲ ಒಂದು ವರ್ಗಕ್ಕೆ ಮಾತ್ರ ಮಾಡಿದ್ದೇವಾ? ಎಂ.ಬಿ.ಪಾಟೀಲ್ ನೀರಾವರಿ ಸಚಿವರಾಗಿ ಕೇವಲ ಅವರ ಸಮುದಾಯಕ್ಕೆ ಮಾತ್ರ ಕೆಲಸ ಮಾಡಿದರಾ? ಇಲ್ಲ. ಎಲ್ಲ ವರ್ಗದವರಿಗೂ ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸಿದೆ ಎಂದು ವಿವರಿಸಿದರು.
ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ನಾವು ಮಾಡಿದ ಕಾರ್ಯಕ್ರಮ ಅತ್ಯುತ್ತಮವಾಗಿತ್ತು ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಟ್ಟ ರಾಜ್ಯ ಕರ್ನಾಟಕ. ಅದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಎಂದು ಹೇಳಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಮಂದಿ ಸತ್ತರು. ಆದರೆ ಕೇವಲ 3 ಜನ ಸತ್ತಿದ್ದಾರೆ ಎಂದು ಸುಳ್ಳು ಹೇಳಿದರು. ಕೋರ್ಟ್ ಛೀಮಾರಿ ಹಾಕಿದ ಮೇಲೆ ಒಂದಿಷ್ಟು ಜನರಿಗೆ ಪರಿಹಾ ನೀಡಲು ಮುಂದಾಗಿದ್ದಾರೆ. ನಾವು ಒತ್ತಡ ಹಾಕಿದ ಮೇಲೆ ಯಡಿಯೂರಪ್ಪ ಅವರು 1 ಲಕ್ಷ ಪರಿಹಾರ ಘೋಷಿಸಿದರು. ರಾಜ್ಯದಲ್ಲಿ 4 ಲಕ್ಷ ಜನ ಕೊರೊನಕ್ಕೆ ಬಲಿಯಾಗಿದ್ದು ಯಾರಿಗೂ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.
ನಾವೆಲ್ಲ ರೈತರ ಮಕ್ಕಳು. ಎಲ್ಲ ಜಾತಿ ಹಾಗೂ ವರ್ಗದವರು ಇಲ್ಲಿದ್ದಾರೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಕೇವಲ ಒಕ್ಕಲಿಗರು, ಲಿಂಗಾಯತರು ಮಾತ್ರವಲ್ಲ, ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿ ಎಲ್ಲರ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತದೆ ಎಂದರು.
ಪಕ್ಷದ ಕಾರ್ಯಕರ್ತರು ಮತ್ತು ಮತದಾರ ಅಶೋಕ್ ಅವರನ್ನು ಗೆಲ್ಲಿಸಲು ಶ್ರಮಿಸಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕಾದರೆ ನಿಮ್ಮ ಸೇವೆಗೆ ಸಿದ್ದರಾಗಿದ್ದೇವೆ. ಮನಗೂಳಿ ಅವರು ಕೊರೊನ ಸಮಯದಲ್ಲಿ ತೀರಿಕೊಂಡರು. ಅನೇಕರಿಗೆ ತೊಂದರೆಯಾಯಿತು. ಪರಿಹಾರ ಮಾತ್ರ ಯಾರಿಗೂ ಬರಲಿಲ್ಲ. ಮೋದಿ 20 ಲಕ್ಷ ಕೋಟಿ ಕೊಡುತ್ತೇನೆ ಎಂದರು. ಚಾಲಕರು, ಬೀದಿಬದಿ ವ್ಯಾಪಾರಿಗಳು, ಬಟ್ಟೆ ಹೊಲಿಯುವವರು, ಮಡಿವಾಳರು, ನೇಕಾರರು ಯಾರಿಗೂ ಪರಿಹಾರ ಸಿಗಲಿಲ್ಲ. ಇದೇನಾ ಅವರು ಕೊಟ್ಟ ಆಡಳಿತ ಎಂದು ಶಿವಕುಮಾರ್ ಪ್ರಶ್ನಿಸಿದರು.
ಚುನಾವಣೆಯಲ್ಲಿ ಬಿಜೆಪಿ ಯಾವುದೇ ಆಮಿಷ ಒಡ್ಡಿದರೂ, ಮಂತ್ರಿಗಳು ಬಂದರೂ ಜಗ್ಗಬಾರದು. ಅಶೋಕ ಮನಗೂಳಿ ಅವರನ್ನು ವಿಧಾನಸೌಧಕ್ಕೆ ಕಳಿಸಿಕೊಡಬೇಕು. ಜನರ ಆಶೀರ್ವಾದ ನಮ್ಮ ಮೇಲೆ ಇರಬೇಕು ಎಂದು ಮನವಿ ಮಾಡಿದರು.


