ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದ ಶಿಯಾ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ಸ್ಪೋಟಗೊಂಡ ಪರಿಣಾಮ 100 ಮಂದಿ ಮೃತಪಟ್ಟಿರುವ ಘಟನೆ ಆಫ್ಘಾನಿಸ್ತಾನದ ಕುಂದಜ್ ನಗರದಲ್ಲಿ ನಡೆದಿದೆ. ಸ್ಫೋಟದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಂದಜ್ ಕೇಂದ್ರ ಆಸ್ಪತ್ರೆಯಲ್ಲಿ 35 ಮೃತದೇಹಗಳನ್ನು ಪಡೆಯಲಾಗಿದೆ. 50 ಮಂದಿ ಗಾಯಾಳುಗಳು ದಾಖಲಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದೆ ವೈದ್ಯರೊಬ್ಬರು ತಿಳಿಸಿದ್ದಾರೆ. ಮತ್ತೊಂದು ಆಸ್ಪತ್ತೆಯಲ್ಲಿ 15 ಮೃತದೇಹಗಳನ್ನು ಪಡೆಯಲಾಗಿದೆ.
ಸ್ಫೋಟದಲ್ಲಿ ಅಲ್ಪಸಂಖ್ಯಾತರಾದ ಶಿಯಾ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. ತೀವ್ರವಾಧಿ ಇಸ್ಲಾಮಿಕ್ ಸ್ಟೇಟ್ ಗುಂಪು ತಾಲಿಬಾನ್ ನ ಕಟ್ಟರ್ ವಿರೋಧಿಯಾಗಿದೆ. ಇದು ಶಿಯಾ ಸಮುದಾಯವನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಿದೆ ಎಂದು ಹೇಳಲಾಗುತ್ತಿದೆ.
ಮಟಿವುಲ್ಲಾ ರೋಹಾನಿ ‘ಇದೊಂದು ಆತ್ಮಹತ್ಯಾ ಬಾಂಬ್ ಸ್ಪೋಟ ಎಂದು ಹೇಳಿದ್ದರೆ, ತಾಲಿಬಾನ್ ವಕ್ತಾರ ಜಲಿವುಲ್ಲಾ ಮುಜಾಹಿದ್ “ಸ್ಫೋಟದಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಶಿಯಾ ಮುಸ್ಲೀಮರನ್ನೇ ಗುರಿಯಾಗಿಸಲಾಗಿದೆ.” ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಹಾಯ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಕರನ್ನು ಕಳೆದುಕೊಂಡ ನೂರಾರು ಮಂದಿ ಆಸ್ಪತ್ರೆಯ ಹೊರಗೆ ಜಮಾವಣೆಗೊಂಡಿದ್ದು, ಹೆಚ್ಚು ಜನ ಸೇರಿರುವ ಇಲ್ಲಿ ಮತ್ತೆ ಸ್ಫೋಟಿಸಬಹುದೆಂಬ ಕಾರಣಕ್ಕಾಗಿ ತಾಲಿಬಾನ್ ಆಡಳಿತ ಜನರನ್ನು ನಿಯಂತ್ರಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆತ್ಮಹತ್ಯ ಬಾಂಬ್ ಸ್ಫೋಟದಲ್ಲಿ ಶಿಯಾ ಸಮುದಾಯಕ್ಕೆ ಸೇರಿದ ಜನರಲ್ಲಿ ಹೆಚ್ಚಿನ ಪ್ರಾಣಹಾನಿಯಾಗಿದೆ. ಇದು ಸ್ಥಳೀಯ ಹಜಾರ್ ಗುಂಪಾಗಿದೆ. ಇಸ್ಲಾಮಿಕ್ ಸ್ಠೇಟ್ ಗುಂಪು ಈ ಸ್ಫೋಟದ ರೂವಾರಿ ಎಂದು ಹೇಳಲಾಗುತ್ತಿದೆ.