Thursday, September 19, 2024
Google search engine
Homeಮುಖಪುಟಮಳೆ ನೀರಿನಲ್ಲಿ ಅಲೆಮಾರಿಗಳ ಬದುಕು - ಕೇಳೋರಿಲ್ಲ ಇವರ ನೋವು

ಮಳೆ ನೀರಿನಲ್ಲಿ ಅಲೆಮಾರಿಗಳ ಬದುಕು – ಕೇಳೋರಿಲ್ಲ ಇವರ ನೋವು

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಹೊರವಲಯದ ಗುಂಡುತೋಪಿನಲ್ಲಿ ಅಲೆಮಾರಿಗಳ ಕುಟುಂಬಗಳು ವಾಸಿಸುತ್ತಿವೆ. ಜೋಪಡಿಯಂತಹ ಗುಡಿಸಲುಗಳಲ್ಲಿ ವಾಸವಾಗಿರುವ ಈ ಕುಟುಂಬಗಳು ಮಳೆಗಾಳ ಬಂತೆಂದರೆ ಜಲಚರಗಳಂತೆ ನೀರಿನಲ್ಲೇ ಜೀವಿಸಬೇಕಾದಂತಹ ಸ್ಥಿತಿ ಇದೆ. ಯಾವುದೇ ಮೂಲಭೂತ ಸೌಲಭ್ಯಗಳೂ ಇಲ್ಲದೆ ನಾಗರಿಕರ ಆಸುಪಾಸಿನಲ್ಲೇ ಬದುಕುತ್ತಿರುವ ಸುಡುಗಾಡು ಸಿದ್ದರ ಎದೆಯಾಳದ ಆಕ್ರಂದನ ಯಾರಿಗೂ ಕೇಳಿಸುತ್ತಿಲ್ಲ.

ಮೂರು ದಶಕಗಳಿಂದಲೂ ಸುಮಾರು 20ಕ್ಕೂ ಹೆಚ್ಚು ಸುಡುಗಾಡು ಸಿದ್ದರ ಕುಟುಂಬಗಳು ಈ ಗುಂಡುತೋಪಿನಲ್ಲಿ ನೆಲೆಸಿವೆ. ಆದರೂ ಇವರ ಸಂಕಟವನ್ನೇ ಕೇಳುವವರೇ ಇಲ್ಲ. ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಹಲವು ಮನವಿಗಳನ್ನು ಸಲ್ಲಿಸಿ ಸೌಲಭ್ಯ ಕಲ್ಪಿಸುವಂತೆ ಕೇಳಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಸುಡುಗಾಡುಸಿದ್ದ ಕುಟುಂಬಗಳು ದೂರಿವೆ.

ತೆಂಗಿನಗರಿಗಳಿಂದ ಬಿಸಿಲ ತಾಪವನ್ನು ಕಡಿಮೆ ಮಾಡಿಕೊಳ್ಳಲು ಗುಡಿಸಲು ನಿರ್ಮಿಸಿಕೊಂಡಿರುವ ಈ ಕುಟುಂಬಗಳು ನಾಗರಿಕ ಜಗತ್ತಿನ ನಡುವೆ ಅಕ್ಷರಶಃ ಆದಿವಾಸಿಗಳಂತೆ ಬದುಕುವಂತಾಗಿದೆ. ಸೌಲಭ್ಯಗಳನ್ನು ನೀಡಬೇಕಾದ ಸರ್ಕಾರ ಈ ಅಲೆಮಾರಿ ಕುಟುಂಬಗಳ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಗುಂಡುತೋಪಿನಲ್ಲಿ ಕುಡಿಯುವ ನೀರಿಲ್ಲ ಸೌಲಭ್ಯ ಕಲ್ಪಿಸಿಲ್ಲ. ವಿದ್ಯುತ್ ಬೆಳಕು ಕತ್ತಲಾಗಿದೆ. ರಸ್ತೆ, ಶಾಲೆ ಯಾವುದೇ ಅನುಕೂಲಗಳು ಇರುವುದಿಲ್ಲ. ಬಿಸಿಲು, ಮಳೆ, ಗಾಳಿಗೆ ಮೈವೊಡ್ಡಿಕೊಂಡೇ ಬದುಕು ಬಂಡಿ ಹೋಗುತ್ತಿದೆ. ಸುಡುಗಾಡು ಸಿದ್ದರ ಕುಟುಂಬದ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಸಾಹಿತಿ ವಡ್ಡಗೆರೆ ನಾಗರಾಜಯ್ಯ ಆಗ್ರಹಿಸಿದ್ದಾರೆ.

ಸುಡುಗಾಡು ಸಿದ್ದರು ಸಣ್ಣಪುಟ್ಟ ವ್ಯಾಪಾರ, ಹಂದಿ ಸಾಕಾಣಿಕೆ ಮತ್ತು ಭಿಕ್ಷಾಟನೆಯಿಂದ ಹೊಟ್ಟೆ ಹೊರೆಯುವಂತಹ ಸ್ಥಿತಿ ಇಂದಿಗೂ ಇದೆ. ಬೆಳಕಿಲ್ಲದ ಈ ಪ್ರದೇಶದಲ್ಲಿ ರಾತ್ರಿ ವೇಳೆ ಹಾವು, ಚೇಳುಗಳ ಕಾಟವೂ ಇದೆ. ಸೊಳ್ಳೆಗಳು ಕಚ್ಚುವುದರಿಂದ ಪದೇಪದೇ ರೋಗಕ್ಕೆ ತುತ್ತಾಗುವಂತಾಗಿದೆ. ಇದೀಗ ಮಳೆ ಸುರಿದು ಎಲ್ಲಾ ಗುಡಿಸಲುಗಳಿಗೂ ನೀರು ನುಗ್ಗಿದೆ. ಸಣ್ಣಮಕ್ಕಳನ್ನು ಹೊಂದಿರುವ ಈ ಕುಟುಂಬಗಳು ಮಳೆ ನೀರಿನಲ್ಲೇ ಜೀವನ ದೂಡಬೇಕಾಗಿ ಬಂದಿದೆ.

ಮಳೆ-ಗಾಳಿಗೆ ಗುಡಿಸಲುಗಳು ಬಿದ್ದುಹೋಗಿವೆ. ಈಗ ಸುಡುಗಾಡು ಸಿದ್ದರಿಗೆ ಆಕಾಶ ಚಪ್ಪರ ಎನ್ನುವಂತಾಗಿದೆ. ಸೌಲಭ್ಯಗಳನ್ನು ಕಲ್ಪಿಸುವಂತೆ ಹಲವು ಹೋರಾಟಗಳು ಕೂಡ ನಡೆದಿವೆ. ಎಷ್ಟೇ ಹೋರಾಟ ಮಾಡಿದರೂ ನಮ್ಮ ಬದುಕು ಅತಂತ್ರವಾಗಿದೆ. ನಾವು ಯಾರಿಗೆ ಹೇಳಬೇಕು. ಈಗಲಾದರೂ ಜಿಲ್ಲಾಧಿಕಾರಿಗಳು ನಮ್ಮ ನೋವು ಕೇಳಿಸಿಕೊಳ್ಳಬೇಕು. ನಮಗೆ ಮನೆ ಕಟ್ಟಿಸಿಕೊಡಬೇಕು ಎಂದು ಅಲೆಮಾರಿಗಳು ಒತ್ತಾಯಿಸಿದ್ದಾರೆ.

ಜಿಲ್ಲೆಯ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈಗಲಾದರೂ ನೊಂದವರ ಸಂಕಟ ಅರ್ಥ ಮಾಡಿಕೊಳ್ಳಬೇಕು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ತವರು ಕ್ಷೇತ್ರದಲ್ಲೇ ಇಂತಹ ದುರ್ಗತಿ ಇದ್ದರೆ ಬೇರೆ ಕಡೆ ಇನ್ನೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಚಿಕ್ಕನಾಯಕನಹಳ್ಳಿಯಿಂದ ಶಾಸಕರಾಗಿ ಆಯ್ಕೆಯಾಗಿ ಸಣ್ಣ ನೀರಾವರಿ ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ ತಮ್ಮ ಕ್ಷೇತ್ರದಲ್ಲಿ ಇಂತಹ ಸಂಕಟಮಯ ಬದುಕಿನಲ್ಲಿ ಜೀವನ ಸಾಗಿಸುತ್ತಿರುವ ಸುಡುಗಾಡು ಸಿದ್ದರ ಕುಟುಂಬಗಳಿಗೆ ಚೈತನ್ಯ ತುಂಬಬೇಕಿದೆ. ಅಲೆಮಾರಿಗಳ ಬದುಕು ಹಸನುಗೊಳಿಸಲು ಮುಂದಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular