Thursday, September 19, 2024
Google search engine
Homeಮುಖಪುಟಸಂಪುಟದಿಂದ ಮಿಶ್ರಾ ಕೈಬಿಡಲು ಹೆಚ್ಚಿದ ಒತ್ತಡ

ಸಂಪುಟದಿಂದ ಮಿಶ್ರಾ ಕೈಬಿಡಲು ಹೆಚ್ಚಿದ ಒತ್ತಡ

ಪುತ್ರ ಅಶಿಶ್ ವಿರುದ್ಧ ರೈತರ ಹತ್ಯೆ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಗೃಹಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಟ್ಟು ಲಖಿಂಪುರಖೇರಿ ಪ್ರಕರಣವನ್ನು ತನಿಖೆ ನಡೆಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ವರ್ಚ್ಯುಯಲ್ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು “ಪ್ರಕರಣದ ಆರೋಪಿಯನ್ನು ಇದುವರೆಗೂ ಬಂಧಿಸಿಲ್ಲ. ಹೀಗಾಗಿ ಇಡೀ ವ್ಯವಸ್ಥೆ ಕೊಲೆಗಾರರನ್ನು ರಕ್ಷಿಸುತ್ತಿದೆ. ಮಿಶ್ರಾ ಮತ್ತು ಅವರ ಪುತ್ರನ ವಿರುದ್ಧ ಆರೋಪಗಳು ಕೇಳಿಬಂದಿದ್ದರೂ ಪ್ರಧಾನಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, ಲಖಿಂಪುರದಲ್ಲಿ ಹತ್ಯೆಗೊಳಗಾದ ರೈತರ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು. ಪ್ರಕರಣದ ತನಿಖೆ ಮುಕ್ತವಾಗಿ ನಡೆಯಬೇಕಾದರೆ ಸಚಿವ ಅಜಯ್ ಕುಮಾರ್ ಮಿಶ್ರಾ ಅವನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವರಾಗಿ ಮುಂದುವರಿಯಲು ಅರ್ಹತೆ ಇಲ್ಲ-ಸಿಬಲ್

ಲಖಿಂಪುರಖೇರಿಗೆ ಭೇಟಿ ನೀಡಿದ ಪ್ರಿಯಾಂಕ ಗಾಂಧಿ ವಿರುದ್ಧ ಸೆಕ್ಷನ್ 151ರಡಿ ಎಫ್ಐಆರ್ ದಾಖಲಿಸಿರುವುದು ಕಾನೂನು ಬಾಹಿರ. ಉತ್ತರ ಪ್ರದೇಶ ಸರ್ಕಾರ ರೈತ ಹತ್ಯಾ ಆರೋಪಿ ಕೇಂದ್ರ ಸಚಿವ ಮಿಶ್ರಾ ಪುತ್ರನೆಂಬುದು ಗೊತ್ತಿದ್ದರೂ ಅದನ್ನು ಎಫ್ ಐಆರ್ ನಲ್ಲಿ ಉಲ್ಲೇಖಿಸದೆ ಕುರುಡಾಗಿ ವರ್ತಿಸಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ಸಿಬಲ್ ಇಷ್ಟೆಲ್ಲಾ ಆರೋಪಗಳಿದ್ದರೂ ಮಿಶ್ರಾ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಇದೆಯೇ? ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸಚಿವರ ರಾಜಿನಾಮೆ ಕೇಳುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

ಪಾದಯಾತ್ರೆ

ಇನ್ನೊಂದೆಡೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಲಖಿಂಪುರಖೇರಿ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಮೊಹಾಲಿಯಿಂದ ಗುರುವಾರ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಮೊಹಾಲಿಯಿಂದ ಲಖಿಂಪುರಖೇರಿವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಂತ್ರಸ್ತ ರೈತ ಕುಟುಂಬಗಳ ಭೇಟಿಯಾದ ರಾಹುಲ್ ತಂಡ

ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದ ಐವರು ಸದಸ್ಯರ ತಂಡ ಲಖಿಂಪುರಖೇರಿಗೆ ಭೇಟಿ ನೀಡಿ ಸಂತ್ರಸ್ತ ರೈತ ಕುಟುಂಬಗಳಿಗೆ ಸಾಂತ್ವನ ಹೇಳಿದೆ. ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ. ಸರ್ವಾಧಿಕಾರ ಆಳ್ವಿಕೆ ನಡೆಸುತ್ತಿದೆ. ಈ ಸರ್ವಾಧಿಕಾರ ರೈತರನ್ನು ಅವಮಾನಿಸುತ್ತಿದೆ. ವಿರೋಧಿ ಮುಖಂಡರನ್ನು ತಡೆಯುತ್ತಿದೆ” ಎಂದು ಟೀಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular