ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 30-35 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಪಕ್ಷ ತೀರ್ಮಾನಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ನಡೆಯುತ್ತಿರುವ ಜೆಡಿಎಸ್ ಪರ್ವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು “ಬದ್ದತೆಯುಳ್ಳ ಮಹಿಳಾ ಕಾರ್ಯಕರ್ತೆಯರನ್ನು ಪಕ್ಷದ ಸಂಘಟನೆಗೆ ಬಳಸಿಕೊಂಡು ಮಹಿಳಾ ಘಟಕವನ್ನು ಬಲಪಡಿಸಲಾಗುವುದು” ಎಂದು ತಿಳಿಸಿದ್ದಾರೆ.
ನಾವು ಕೆಲವು ಕ್ಷೇತ್ರಗಳನ್ನು ಗುರುತಿಸಿದ್ದೇವೆ. ಮೊದಲ ಹಂತದಲ್ಲಿ 6-7 ಮಹಿಳಾ ಅಭ್ಯರ್ಥಿಗಳನ್ನು ಗುರುತಿಸಿದ್ದು ಅವರನ್ನು ಕಣಕ್ಕೆ ಇಳಿಸುತ್ತೇವೆ. ಮಹಿಳಾ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುತ್ತೇವೆ. ಕಾರ್ಯಾಗಾರದಲ್ಲಿ ಮಹಿಳ ಅಭ್ಯರ್ಥಿಗಳು ಅವರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಬಗ್ಗೆಯೂ ತರಬೇತಿ ನೀಡಿದ್ದೇವೆ ಎಂದಿದ್ದಾರೆ.
ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಇಚ್ಚೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ವಂತ ಶಕ್ತಿಯ ಮೇಲೆ ಆದಿಕಾರಕ್ಕೆ ಬರಲಿದೆ. ಮಿಷನ್ 123 ಸ್ಥಾನಗಳ ಗುರಿಯನ್ನು ಮುಟ್ಟುತ್ತೇವೆ. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಒತ್ತಾಯ ಕೇಳಿಬಂದಿದೆ. ಅದರಂತೆ ಮಹಿಳೆಯರು ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಮಾಜದಲ್ಲಿ ಹೆಣ್ಣಿಗೆ ತಕ್ಕನಾದ ಸ್ಥಾನಮಾನಗಳನ್ನು ನೀಡಿದರೆ ಜಗತ್ತಿಗೆ ಅವಳು ಮಾದರಿಯಾಗುವಂತೆ ನೀಡಿದ ಕೆಲಸವನ್ನು ಪೂರೈಸುತ್ತಾಳೆ. ಅವಳ ತ್ಯಾಗ, ಚಿಂತನೆ, ನಿಸ್ವಾರ್ಥ ಭಾವ, ಸಮಾನತೆ, ಎಂದಿಗೂ ಒಂದೇ ರೀತಿಯಲ್ಲಿರುತ್ತದೆ. ಹೆಣ್ಣಿನ ಸಬಲೀಕರಣಕ್ಕೆ ಉತ್ತಮ ಅಂಶಗಳನ್ನು ನೀಡಿ ಸದಾಕಾಲ ಅವಳನ್ನು ಗೌರವಿಸದರೆ ಅವಳು ತನ್ನ ಜೀವನದಲ್ಲಿ ಇನ್ನೊಬ್ಬರಿಗೆ ನೀಡುವ ಸ್ಥಾನ ಮಹತ್ತರವಾಗಿರುತ್ತದೆ ಎಂದು ಹೇಳಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಏನೋ ಬಂದಿದೆ. ಅದರೆ ಇಲ್ಲಿನ ಹೆಣ್ಣುಮಕ್ಕಳಿಗೆ ಈವರೆಗೂ ಹಲವಾರು ನಿರ್ಬಂಧಗಳಿವೆ. ಸ್ವಾತಂತ್ರ್ಯದ ವಿಚಾರದಲ್ಲಿ ಆಕೆಗೆ ಹಕ್ಕು ಕೇವಲ ಸಂವಿಧಾನದಲ್ಲಿದೆಯೇ ಹೊರತು ನಿಜ ಜೀವನದಲ್ಲಿ ಅಲ್ಲ. ಅವಳ ನಿರ್ಧಾರಗಳಿಗೆ ಮನೆಯವರೇ ಸೂಕ್ತ ಬೆಂಬಲ ನೀಡುವುದಿಲ್ಲ. ಇದು ಪ್ರಸ್ತುತ ಸನ್ನಿವೇಶ. ಈ ವ್ಯವಸ್ಥೇಯ ಬದಲಾವಣೆ ಹಾಗೂ ಮಹೋನ್ನತ ಸಾಧನೆಗೆ ಜನಶಕ್ತಿ ಪೂರಕವಾಗಬೇಕೇ ಹೊರತು ಮಾರಕವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.