ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅಮರಿಂದರ್ ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ ಬಳಿಕ ಬಿಜೆಪಿಗೆ ಸೇರುತ್ತಾರೆಂಬ ಊಹಾಪೋಹಕ್ಕೆ ಮತ್ತಷ್ಟು ರೆಕ್ಕೆಪುಕ್ಕಗಳು ಬಂದಿವೆ.
ಶಾ ಭೇಟಿ ಮಾಡಿದ ಬಳಿಕ ಬಿಜೆಪಿ ಸೇರುವ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಅಮರಿಂದರ್ ನಿರಾಕರಿಸಿದ್ದಾರೆ. ಆದರೆ “ಆಯ್ಕೆ ಮುಕ್ತವಾಗಿದೆ” ಎಂದು ಹೇಳಿದ್ದಾರೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಅಮರಿಂದರ್ ಸಿಂಗ್ ಆಪ್ತರು “ಇದೊಂದು ಸೌಹಾರ್ದ ಭೇಟಿ” ಎಂದು ಹೇಳಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ ದೆಹಲಿಯಲ್ಲಿ ಅಮರಿಂದರ್ ಸಿಂಗ್ ಅವರಿಗೆ ಸರ್ಕಾರ ನೀಡಿದ್ದ ಕಪುರ್ತಲ ನಿವಾಸವನ್ನು ಖಾಲಿ ಮಾಡಿದ್ದಾರೆ. ಇದು ಕೂಡ ಅಮರಿಂದರ್ ಸಿಂಗ್ ನಡೆಯನ್ನು ಅನುಮಾನಿಸುವಂತೆ ಮಾಡಿದೆ.
ಅಮರಿಂದರ್-ಅಮಿತ್ ಶಾ ಭೇಟಿ ಬಗ್ಗೆ ಕಾಂಗ್ರೆಸ್ ನಾಯಕ ಮನಿಶ್ ತಿವಾರಿ ಹೇಳಿಕೆಯನ್ನು ಉಲ್ಲೇಖಿಸಿರುವ ಎನ್.ಡಿ.ಟಿವಿ “ಕೆಲ ಕಾರಣಗಳಿಗೆ ಭೇಟಿ ಮಾಡಿರಬಹುದು. ಅವರು ಪಕ್ಷ ತೊರೆಯುವುದಿಲ್ಲ’ ಎಂದು ಹೇಳಿದೆ.
ಮಾಜಿ ಮುಖ್ಯಮಂತ್ರಿ ಅಮರಿಂದರ್ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂದಿ ಅವರನ್ನು ಭೇಟಿಯಾಗುತ್ತಾರೆ. ಇದೊಂದು ಸೌಹಾರ್ದಯುತ ಭೇಟಿ. ಎರಡು ಬಾರಿ ಮುಖ್ಯಮಂತ್ರಿ ಆಗಲು ಅವಕಾಶ ನೀಡಿದ್ದಕ್ಕೆ ಸೋನಿಯಾ ಅವರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ ಎಂದು ಎಕ್ಸ್ ಪ್ರೆಸ್ ವರದಿ ಮಾಡಿದೆ.