ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ಹಿರಿಯ ಮುಖಂಡ ಕಪಿಲ್ ಸಿಬಲ್ “ಪಕ್ಷ ಅಸ್ತಿತ್ವಕ್ಕಾಗಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಚುನಾಯಿತ ಅಧ್ಯಕ್ಷರೇ ಇಲ್ಲ. ಆದರೆ ಯಾರು ನಿರ್ಧಾರ ಕೈಗೊಳ್ಳುತ್ತಿದ್ದಾರೋ ಗೊತ್ತಿಲ್ಲ” ಎಂದು ಕಿಡಿಕಾರಿದ್ದಾರೆ.
ಪಕ್ಷ ತೊರೆಯುವವರು ಹೆಚ್ಚಾಗುತ್ತಿದ್ದಾರೆ. ಯಾಕೆಂದು ಗೊತ್ತಿಲ್ಲ. ಆದರೆ ಜಿ-23 ಗುಂಪಿನ ನಾಯಕರು ಸಮಸ್ಯೆಯ ಬಗ್ಗೆ ದನಿ ಎತ್ತುತ್ತೇವೆ. ಜಿ-23 ಗುಂಪಿನ ನಾಯಕರು “ಜೀ ಹುಜೂರ್” ಅಲ್ಲ. ನಾವು ಸೋನಿಯಾ ಗಾಂದಿ ಅವರಿಗೆ ಕಳೆದ ವರ್ಷ ಪತ್ರ ಬರೆದು ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಗೆ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಒತ್ತಾಯಿಸಿದ್ದೆವು” ಎಂದು ಹೇಳಿದ್ದಾರೆ.
ಮತ್ತೊಂದು ಜಿ-23 ಗುಂಪಿನ ನಾಯಕ ಗುಲಾಂ ನಭಿ ಅಜಾದ್ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಶೀಘ್ರವೇ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಕರೆದು ಪಂಜಾಬ್ ನಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಮಾತುಕೆ ನಡೆಸಬೇಕೆಂದು ಆಗ್ರಹಿಸಿದ್ದಾರೆ ಎಂದು ಸಿಬಲ್ ತಿಳಿಸಿದ್ದಾರೆ.
“ಕಾಂಗ್ರೆಸ್ ಪಕ್ಷವನ್ನು ಏಕೆ ತೊರೆಯುತ್ತಿದ್ದಾರೆ. ಇದರಲ್ಲಿ ನಮ್ಮ ತಪ್ಪೇನಾದರೂ ಇದೆಯೇ ಎಂದು ನೋಡುತ್ತಿದ್ದೇವೆ. ನಾವು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಕರೆದು ಮಾತುಕತೆ ನಡೆಸಬೇಕು ಎಂದು ಒತ್ತಾಯಿಸುತ್ತೇವೆ” ಎಂದಿದ್ದಾರೆ.
“ನಾನು ಪಕ್ಷದ ಸಿದ್ದಾಂತ ತೊರೆಯಲು ಬಯಸುವುದಿಲ್ಲ. ನಾವು ಎಲ್ಲಿಗೂ ಹೋಗುವುದಿಲ್ಲ. ಆದರೆ ಅವರಿಗೆ(ನಾಯಕತ್ವಕ್ಕೆ) ಹತ್ತಿರ ಇದ್ದವರು ಪಕ್ಷ ತೊರೆಯುತ್ತಿದ್ದಾರೆ. ಅವರಿಗೆ ಹತ್ತಿರ ಇಲ್ಲದವರು ಅಲ್ಲಿ(ಪಕ್ಷ)ಯೇ ಇದ್ದಾರೆ” ಎಂದು ಸಿಬಲ್ ಪಕ್ಷನಿಷ್ಠರನ್ನು ಕಡೆಗಣಿಸುತ್ತಿರುವ ಬಗ್ಗೆ ಹೈಕಮಾಂಡ್ ಗಮನ ಸೆಳೆದಿದ್ದಾರೆ.
ಪಂಜಾಬ್ ನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ನಡುವೆಯೇ ಪಕ್ಷದಲ್ಲಿ ಆಗಬೇಕಾದ ಬದಲಾವಣೆ, ಪಕ್ಷಕ್ಕೆ ಕಾಯಂ ಅಧ್ಯಕ್ಷರ ಆಯ್ಕೆ ಸಂಬಂಧ ಕಪಿಲ್ ಸಿಬಲ್ ಅವರಿಂದ ಹೇಳಿಕೆ ಹೊರಬಿದ್ದಿದೆ.
ಪಂಜಾಬ್ ಸರ್ಕಾರ ಡಿಯೋಲ್ ಅವರನ್ನುಅಡ್ವೋಕೇಟ್ ಜನರಲ್ ನ್ನಾಗಿ ನೇಮಕ ಮಾಡಿರುವುದು ಸೇರಿದಂತೆ ಹಲವು ನೇಮಕಗಳ ಕುರಿತು ನವಜೋತ್ ಸಿಂಗ್ ಸಿಧು ಅಸಮಾಧಾನ ಹೊರಹಾಕಿ ರಾಜಿನಾಮೆ ನೀಡಿದ್ದರು. ಈ ಹಿಂದೆ ಮಹಿಳಾ ನಾಯಕಿ ಸುಸ್ಮಿತ ದೇವ್, ಗೋವಾ ಮುಖಂಡ ಉಜಿನ್ಹೋ ರಾಜಿನಾಮೆ ನೀಡಿ ಟಿಎಂಸಿ ಸೇರಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಪಿಲ್ ಸಿಬಲ್ ಕೂಡ ಅಸಮಾಧಾನ ಹೊರಹಾಕಿರುವುದು ಸಾಕಷ್ಟು ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ.