ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಒಂದು ದಿನದ ಬಳಿಕ ಪತ್ರಿಕ್ರಿಯೆ ನೀಡಿರುವ ನವಜೋತ್ ಸಿಂಗ್ ಸಿಧು ನನಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ಕೊನೆಯ ಉಸಿರು ಇರುವವರೆಗೂ ನಾನು ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಹದಿನೇಳು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಜನರ ಜೀವನದ ಒಳಿತಿಗಾಗಿ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಇದು ನನ್ನ ಕರ್ತವ್ಯ ಮತ್ತು ಹಕ್ಕು ಎಂದು ಹೇಳಿದ್ದಾರೆ.
ನನ್ನ ಹೋರಾಟ ವಿಷಯಾಧಾರಿತವಾಗಿದೆ. ಇದಕ್ಕೆ ನಾನು ದೀರ್ಘ ಕಾಲ ತೆಗೆಕೊಂಡಿದ್ದೇನೆ. ರಾಜಕೀಯದಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ನಾನು ಹೈಮಾಂಡ್ ಅನ್ನು ದಿಕ್ಕು ತಪ್ಪಿಸಿಲ್ಲ ಎಂದು ಅಮರಿಂದರ್ ಸಿಂಗ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ ಪರ ಮತ್ತು ಸತ್ಯದ ಪರ ನಿಲ್ಲುವುದಕ್ಕೆ ನಾನು ಯಾವುದೇ ತ್ಯಾಗಕ್ಕೂ ಸಿದ್ದವಿದ್ದೇನೆ. ಸೋತವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದು ಮತ್ತು ಕೆಲವರನ್ನು ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿದ್ದನ್ನು ನಾನು ವಿರೋಧಿಸಿದ್ದೇನೆ. ಈಗಲೂ ಅದಕ್ಕೆ ಬದ್ದನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಡಿಜಿಪಿ ಮತ್ತು ಅಡ್ವೋಕೇಟ್ ಜನರಲ್ ನೇಮಕದ ಬಗ್ಗೆ ಸಿಧು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಮೀನು ಪಡೆದವರು ಅಡ್ವೋಕೇಟ್ ಜನರಲ್ ನ್ನಾಗಿ ನೇಮಕ ಮಾಡಲಾಗಿದೆ. ಪಂಜಾಬ್ ಪೊಲೀಸ್ ಮಹಾನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಇಕ್ಬಾಲ್ ಪ್ರೀತ್ ಸಿಂಗ್ ಸಹೋತಾ ಅವರಂತಹ ವ್ಯಕ್ತಿಗಳಿಗೆ ನ್ಯಾಯ ನೀಡುವ ಜವಾಬ್ದಾರಿ ವಹಿಸಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.