ದೇಶದಲ್ಲಿ ಶೇ.44.4ರಷ್ಟು ಇತರೆ ಹಿಂದುಳಿದ ವರ್ಗದ ಕುಟುಂಬಗಳಿದ್ದು ಅವುಗಳಲ್ಲಿ ಬಹುತೇಕ ಅಂದರೆ ಶೇ.17ರಷ್ಟು ಒಬಿಸಿ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿವೆ. ಈ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ತಮಿಳುನಾಡು, ಬಿಹಾರ, ತೆಲಂಗಾಣ, ಉತ್ತರಪ್ರದೇಶ, ಕೇರಳ, ಕರ್ನಾಟಕ ಮತ್ತು ಛತ್ತೀಸ್ ಗಡ ರಾಜ್ಯಗಳಲ್ಲಿ ಇತರೆ ಹಿಂದುಳಿದ ವರ್ಗದ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಸಿದ್ದು 235 ಸಂಸದರನ್ನು ಲೋಕಸಭೆಗೆ ಕಳಿಸುತ್ತಿವೆ ಎಂಬುದನ್ನು ವರದಿ ಬೊಟ್ಟು ಮಾಡಿದೆ.
2019ರಲ್ಲಿ ಯೋಜನಾ ಅನುಷ್ಠಾನ ಮತ್ತು ಸಾಂಖ್ಯಿಖ ಸಚಿವಾಲಯದಡಿ ಬರುವ ರಾಷ್ಟ್ರೀಯ ಸರ್ವೇ ಕಚೇರಿ ಜುಲೈ-ಜೂನ್ ಕೃಷಿ ವರ್ಷದಲ್ಲಿ ನಡೆಸಿದ ಸರ್ವೇಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕೃಷಿ ಕುಟುಂಬಗಳು, ಜಮೀನು ಹೊಂದಿರುವ ಕುಟುಂಬಗಳು ಗ್ರಾಮೀಣ ಭಾರತದಲ್ಲಿ ನೆಲೆಸಿವೆ.
17.24 ಕೋಟಿ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿವೆ. ಇವುಗಳಲ್ಲಿ ಶೇ.44.4ರಷ್ಟು ಒಬಿಸಿ ಕುಟುಂಬಗಳು, ಶೇ.21.6ರಷ್ಟು ಪರಿಶಿಷ್ಟ ಜಾತಿ ಕುಟುಂಬಗಳು, ಶೇ.12.3 ಪರಿಶಿಷ್ಟ ಪಂಗಡದ ಕುಟುಂಬಗಳು ಮತ್ತು ಶೇ.21.7ರಷ್ಟು ಇತರೆ ಸಮಾಜ ಗುಂಪುಗಳು ಸೇರಿವೆ. ಗ್ರಾಮೀಣ ಪ್ರದೇಶದಲ್ಲಿ 9.34 ಕೋಟಿ ಮಂದಿ ಇದ್ದು ಶೇ.54ರಷ್ಟು ಕೃಷಿ ಕುಟುಂಬಗಳಾಗಿವೆ.
ದೇಶದ ಎಂಟು ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅತಿಹೆಚ್ಚು ಒಬಿಸಿ ಕುಟುಂಬಗಳು ನೆಲೆಸಿರುವುದು NSO ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ದೃಢಪಟ್ಟಿದೆ. ತಮಿಳುನಾಡಿನಲ್ಲಿ ಶೇ.67.7ರಷ್ಟು ಕುಟುಂಬಗಳು ವಾಸಿಸುತ್ತಿದ್ದರೆ, ನಾಗಾಲ್ಯಾಂಡ್ ನಲ್ಲಿ ಕಡಿಮೆ ಅಂದರೆ ಶೇ.02ರಷ್ಟು ಒಬಿಸಿ ಕುಟುಂಬಗಳು ನೆಲೆಸಿವೆ.
ಬಿಹಾರದಲ್ಲಿ ಶೇ.58.1ರಷ್ಟು ಒಬಿಸಿ ಕುಟುಂಬಗಳು, ತೆಲಂಗಾಣದಲ್ಲಿ ಶೇ.57.4ರಷ್ಟು ಒಬಿಸಿ ಕುಟುಂಬಗಳು, ಉತ್ತರಪ್ರದೇಶ ಶೇ.56.5ರಷ್ಟು, ಕೇರಳ ಶೇ.55.2ರಷ್ಟು, ಕರ್ನಾಟಕ ಶೇ.51.6ರಷ್ಟು, ಛತ್ತೀಸ್ ಗಡ ಶೇ.51.4ರಷ್ಟು ಮತ್ತು ಇತರೆ ಸಮಾಜ ಗುಂಪುಗಳು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದು 543 ಲೋಕಸಭಾ ಸದಸ್ಯರಲ್ಲಿ 235 ಸದಸ್ಯರನ್ನು ಈ ಒಬಿಸಿ ಕುಟುಂಬಗಳು ಆಯ್ಕೆ ಮಾಡಿ ಲೋಕಸಭೆಗೆ ಕಳಿಸುತ್ತವೆ ಎಂದು ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇನ್ನುಳಿದಂತೆ ರಾಜಸ್ಥಾನ (ಶೇ.46.8), ಆಂಧ್ರಪ್ರದೇಶ (ಶೇ.45.8), ಗುಜರಾತ್ (ಶೇ.45.4), ಸಿಕ್ಕಿಂ(ಶೇ.45) ಒಬಿಸಿ ಕುಟುಂಬಗಳು ಇವೆ.
ಅಲ್ಲದೆ ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಮಣಿಪುರ, ಒಡಿಸ್ಸಾ, ಹರ್ಯಾಣ, ಅಸ್ಸಾಂ, ಉತ್ತರಖಂಡ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮಬಂಗಾಳ, ತ್ರಿಪುರ, ಪಂಜಾಬ್, ಹಿಮಾಚಲಪ್ರದೇಶ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಕಡಿಮೆ ಒಬಿಸಿ ಕುಟುಂಬಗಳು ನೆಲೆಸಿವೆ.
ದೇಶದ 9.3 ಕೋಟಿ ಕೃಷಿ ಕುಟುಂಬಗಳಲ್ಲಿ ಶೇ.45.8ರಷ್ಟು ಒಬಿಸಿ, ಶೇ.15.9ರಷ್ಟು ಪರಿಶಿಷ್ಟ ಜಾತಿ, ಶೇ.14.2ರಷ್ಟು ಪರಿಶಿಷ್ಟ ಪಂಗಡ ಮತ್ತು ಶೇ.24.4ರಷ್ಟು ಇತರೆ ಸಮಾಜ ಗುಂಪುಗಳು ಸೇರಿವೆ.
2018-19ನೇ ಕೃಷಿ ವರ್ಷದ ಅಂಕಿಅಂಶಗಳ ಪ್ರಕಾರ ಪ್ರತಿ ಕೃಷಿ ಕುಟುಂಬದ ಮಾಸಿಕ ಆದಾಯ 10,219 ರೂಪಾಯಿ ಅದರಲ್ಲಿ ಒಬಿಸಿ ಕುಟುಂಬಗಳದ್ದು 9975 ರೂ ಆದಾಯ ಆಗಿದೆ. ಪರಿಶಿಷ್ಟ ಜಾತಿ ಕೃಷಿ ಕುಟುಂಬಗಳ ಮಾಸಿಕ ವರಮಾನ 8,142 ರೂ, ಪರಿಶಿಷ್ಟ ಪಂಗಡ ಕೃಷಿ ಕುಟುಂಬಗಳ ಮಾಸಿಕ ಆದಾಯ 8,979 ರೂ. ಮತ್ತು ಇತರೆ ಸಮಾಜ ಗುಂಪುಗಳ ಮಾಸಿಕ ಆದಾಯ 12,806 ರೂ ಎಂದು ಡೇಟಾ ತಿಳಿಸಿದೆ.